Advertisement

ಹೊರ ರಾಜ್ಯದ ಕೂಲಿ ಕಾರ್ಮಿಕರ ತಪಾಸಣೆ

01:22 PM Apr 08, 2020 | Suhan S |

ಸಕಲೇಶಪುರ: ಹೊರ ರಾಜ್ಯದಿಂದ ಕಾಫಿ ತೋಟವೊಂದರಲ್ಲಿ ಕೆಲಸ ಮಾಡಲು ಬಂದ ಕೂಲಿ ಕಾರ್ಮಿಕರು ಗ್ರಾಮದಲ್ಲಿ ಇರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬುಗಡಹಳ್ಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು.

Advertisement

ತಾಲೂಕಿನ ಕ್ಯಾನಹಳ್ಳಿ ಗ್ರಾಪಂ ವ್ಯಾಪ್ತಿಯ ಬುಗಡ ಹಳ್ಳಿ ಗ್ರಾಮದ ಕಾಫಿ ತೋಟವೊಂದರ ಮಾಲಿಕರು ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಕಾಫಿ ತೋಟವನ್ನು ನಿರ್ವಹಣೆ ಮಾಡಲಾಗದೇ ಬೇರೊಬ್ಬರಿಗೆ ಗುತ್ತಿಗೆ ನೀಡಿದ್ದರು. ತೋಟವನ್ನು ಗುತ್ತಿಗೆ ಪಡೆದಿದ್ದ ವ್ಯಕ್ತಿ ತೋಟದಲ್ಲಿ ಕೃಷಿ ಕೆಲಸ ಮಾಡಲು ಪಕ್ಕದ ಮೂಡಿಗೆರೆ ತಾಲೂಕಿನ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ 16 ಜನ ಕೃಷಿ ಕಾರ್ಮಿಕರನ್ನು ಅಧಿಕಾರಿಗಳ ಅನುಮತಿ ಪಡೆದು ಗ್ರಾಮಕ್ಕೆ ಕಳೆದ ಎರಡು ದಿನಗಳ ಹಿಂದೆ ಕರೆ ತಂದಿದ್ದರು. ಆದರೆ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಅಪರಿಚಿತರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿದೆ. ಕೂಡಲೇ ಇವರನ್ನು ಇಲ್ಲಿಂದ ಜಾಗ ಖಾಲಿ ಮಾಡಿಸಬೇಕು ಎಂದು ಗ್ರಾಪಂಗೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಗ್ರಾಪಂಯವರು ಅವರನ್ನು ತೆರವುಗೊಳಿಸಲು ಮುಂದಾದಾಗ ತೋಟದ ಮಾಲೀಕರು ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ಲಾಕ್‌ ಡೌನ್‌ ಇರುವುದರಿಂದ ಕೂಲಿ ಬೇರೆಲ್ಲೂ ಕಳುಹಿಸಲಾಗುವುದಿಲ್ಲ. ಅವರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸುತ್ತೇವೆ ಎಂದು ಹೇಳಿದ್ದರಿಂದ ಉಪವಿಭಾ ಗಾಧಿಕಾರಿ ಗಿರೀಶ್‌ ನಂದನ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಇವರ ಆರೋಗ್ಯ ತಪಾಸಣೆ ಮಾಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಉಪ ವಿಭಾಗಾಧಿಕಾರಿ ಗಿರೀಶ್‌ ನಂದನ್‌, ಕಾರ್ಮಿಕಕರಿಗೆ ಗುತ್ತಿಗೆದಾರರು ಮೂಲ ಸೌಕರ್ಯ ಒದಗಿಸಬೇಕು. ಕೂಲಿ ಕಾರ್ಮಿಕರಿಗೆ ಗ್ರಾಮಸ್ಥರು ತೊಂದರೆ ನೀಡಬಾರದು ಎಂದರು. ಟಿಎಚ್‌ಒ ಮಹೇಶ್‌, ಕ್ಯಾನಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಗ್ರಾಮಾಂತರ ಠಾಣೆ ಪಿಎಸ್‌ಐ ಚಂದ್ರಶೇಖರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next