Advertisement

ಚರಂಡಿ ನೀರು ನುಗ್ಗಿದ ಮನೆಗಳ ಪರಿಶೀಲನೆ

03:34 PM Jun 17, 2017 | Team Udayavani |

ಶಹಾಬಾದ: ನಗರದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಚರಂಡಿ ನೀರು ನುಗ್ಗಿದ ಮನೆಗಳಿಗೆ ನಗರಸಭೆ ಪೌರಾಯುಕ್ತ ಶರಣು ಪೂಜಾರಿ ಹಾಗೂ ಇತರ ಸಿಬ್ಬಂದಿ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Advertisement

ತಕ್ಷಣವೇ ಕಿರಿದಾದ ಚರಂಡಿಯನ್ನು  ಜೆಸಿಬಿ ಮುಖಾಂತರ ರಸ್ತೆಯನ್ನು ಅಗೆದು ಅಗಲಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾದರು. ಅಲ್ಲದೆ ಪೌರಕಾರ್ಮಿಕರು ಚರಂಡಿಗಳಲ್ಲಿನ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗುವಂತೆ ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಅವರಿಗೆ ಆದೇಶಿಸಿದರು. ಮನೆಗಳಿಗೆ ನೀರು ನುಗ್ಗದಂತೆ ನಗರದ ಎಲ್ಲ ಚರಂಡಿಗಳಲ್ಲಿನ ಹೂಳು ಮತ್ತು ತ್ಯಾಜ್ಯವನ್ನು ತೆಗೆಯಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತದೆ.

ಅಲ್ಲದೇ ನಗರದ ವಾರ್ಡ್‌ ನಂ. 17ರ ಮುಖ್ಯರಸ್ತೆಯಲ್ಲಿರುವ ಚರಂಡಿ ಕಿರಿದಾಗಿದೆ. ಅಲ್ಲದೇ ಅದರೊಳಗೆ ಹೂಳು ತುಂಬಿಕೊಂಡು ನೀರು ಹರಿಯಲು ಅಡಚಣೆ ಆಗುತ್ತಿದೆ. ಆದ್ದರಿಂದ ಚರಂಡಿ ನೀರು ಮನೆಗಳಿಗೆ ಹಾಗೂ ಅಂಗಡಿಗಳಿಗೆ ನುಗ್ಗುತ್ತಿದೆ. ಚರಂಡಿ ಅಗಲಗೊಳಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುತ್ತೇನೆ ಎಂದು ಪೌರಾಯುಕ್ತ ಶರಣು ಪೂಜಾರಿ ತಿಳಿಸಿದರು.
 
ಕಸಾಪ ಅಧ್ಯಕ್ಷರ ಆಕ್ರೋಶ: ರಾತ್ರಿ ಜೆಸಿಬಿಯಿಂದ ರಸ್ತೆಯನ್ನು ಅಗೆದ ಪರಿಣಾಮ ದೊಡ್ಡ ಗುಂಡಿ ನಿರ್ಮಾಣವಾಗಿದೆ. ಅಲ್ಲದೆ ಕುಡಿಯುವ ನೀರಿನ ಪೈಪ್‌ ಒಡೆದ ಪರಿಣಾಮ ಮತ್ತಷ್ಟು ರಸ್ತೆಯನ್ನು ತೋಡಿ ಅಗಲಗೊಳಿಸಿದ್ದಾರೆ. ಗುಂಡಿಯ ಸುತ್ತಲೂ ಸುರಕ್ಷತೆಯ ಯಾವುದೇ ಪರಿಕರಗಳನ್ನು ಅಳವಡಿಸಿಲ್ಲ. ಇದರಿಂದ ನಾನು ಜಾರಿ ಬಿದ್ದಿದ್ದೇನೆ ಎಂದು ಕಸಾಪ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next