Advertisement

ಜಿಲ್ಲಾ ಆಸ್ಪತ್ರೆ ಅಭಿವೃದ್ಧಿಗಾಗಿ ಪರಿಶೀಲನೆ

08:11 AM May 27, 2019 | Suhan S |

ಚಿಕ್ಕಮಗಳೂರು: ನಗರದ ಮಲ್ಲೇಗೌಡ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಗೆ ಶಾಸಕ ಸಿ.ಟಿ.ರವಿ ಭೇಟಿ ನೀಡಿ ಖಾಸಗಿ ಸಹಭಾಗಿತ್ವ ಹಾಗೂ ರಾಜ್ಯ ಸರ್ಕಾರದ ಅನುದಾನ ಬಳಸಿ ಆಸ್ಪತ್ರೆ ಅಭಿವೃದ್ಧಿ ಪಡಿಸುವ ಕುರಿತು ಪರಿಶೀಲನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಬುದಾಬಿಯಲ್ಲಿ ದೊಡ್ಡ ಉದ್ಯಮಿಯಾಗಿರುವ ಉಡುಪಿಯ ಡಾ| ಬಿ.ಆರ್‌. ಶೆಟ್ಟಿ ಅವರ ಸಹಭಾಗಿತ್ವ ಹಾಗೂ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ 50 ಕೋಟಿ ರೂ. ಅನುದಾನ ಬಳಸಿ ಜಿಲ್ಲಾ ಆಸ್ಪತ್ರೆ ವಿಸ್ತರಿಸುವ ಸಂಬಂಧ ಸಮಗ್ರ ಯೋಜನೆಯೊಂದನ್ನು ತಯಾರಿಸಬೇಕಿದೆ. ಈ ಸಲುವಾಗಿ ಪರಿಶೀಲನಾ ಕಾರ್ಯ ನಡೆಸುತ್ತಿದ್ದೇವೆ ಎಂದರು.

ಡಾ| ಬಿ.ಆರ್‌. ಶೆಟ್ಟಿ ಅವರು ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭೇಟಿ ಯಾಗಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರಿಗೆ ಯಾವುದಾದರೊಂದು ಕೊಡುಗೆ ನೀಡಬೇಕೆಂದು ಮನವಿ ಮಾಡಿದ್ದೆವು. ಅದಕ್ಕೆ ಸ್ಪಂದಿಸಿದ ಅವರು, ಉಡುಪಿಯಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಡಿ ಆಸ್ಪತ್ರೆಯೊಂದನ್ನು ನಿರ್ವಹಿಸುತ್ತಿದ್ದೇವೆ ಅದನ್ನೊಮ್ಮೆ ನೋಡಿ ಬನ್ನಿ ಎಂದಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಪ್ರಮುಖರುಗಳಾದ ಸೀತಾರಾಮ ಭರಣ್ಯ, ಪ್ರೇಮ್‌ಕುಮಾರ್‌, ಹೆಚ್.ಡಿ.ತಮ್ಮಯ್ಯ ಸೀತಾರಾಮ ಭರಣ್ಯ ಅವರೊಂದಿಗೆ ಡಾ| ಮಂಜುನಾಥ್‌ ಅವರನ್ನು ಕಳಿಸಿಕೊಟ್ಟು ವರದಿಯೊಂದನ್ನು ತರಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ಕಳೆದ ಎರಡು ದಿನಗಳ ಹಿಂದೆ ಮತ್ತೆ ಡಾ| ಬಿ.ಆರ್‌. ಶೆಟ್ಟಿ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲೂ ಅವರು ಕೊಡುಗೆ ನೀಡುವ ಮಾತಿಗೆ ಬದ್ಧರಿರುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕಡೆಯಿಂದ ಆಸ್ಪತ್ರೆ ಅಭಿವೃದ್ಧಿಗೆ ಏನು ಮಾಡಬಹುದು ಎನ್ನುವುದನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳ ಜೊತೆಗೂ ಚರ್ಚಿಸಿ ಯೋಜನೆಯೊಂದನ್ನು ರೂಪಿಸುತ್ತೇವೆ ಎಂದು ತಿಳಿಸಿದರು.

ಬಿ.ಆರ್‌.ಶೆಟ್ಟಿ ಅವರು ಉಡುಪಿಯಲ್ಲಿ 150 ಕೋಟಿ ರೂ. ವೆಚ್ಚ ಮಾಡಿ 5 ಅಂತಸ್ಥಿನ ಆಸ್ಪತ್ರೆ ನಿರ್ಮಿಸಿ ನಿರ್ವಹಣೆಯನ್ನೂ ಮಾಡುತ್ತಿದ್ದಾರೆ. ರೋಗಿಗಳಿಗೆ ಉಚಿತ ಸೇವೆಯನ್ನೂ ನೀಡುತ್ತಿದ್ದಾರೆ ಎಂದರು.

Advertisement

ಇದೇ ವೇಳೆ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸಲು ನಾವು 400 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರದ ಬಳಿ ಕೇಳಿದ್ದೆವು. ಸರ್ಕಾರ 50 ಕೋಟಿ ರೂ. ಮಂಜೂರು ಮಾಡಿದೆ. ಅದನ್ನು ಬೇಕಾಬಿಟ್ಟಿ ಬಳಸುವ ಬದಲು ಯೋಜನಾ ಬದ್ಧವಾಗಿ ಬಳಸಿ ಏನಾದರೂ ಶಾಶ್ವತ ಪ್ರಯೋಜನ ಸಿಗುವ ಯೋಜನೆ ಹಮ್ಮಿಕೊಳ್ಳಲು ಯೋಚಿಸಿದ್ದೆವು. ಆದರೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಯೋಜನೆ ತಯಾರಿಸಲು ಸಾಧ್ಯವಾಗಿರಲಿಲ್ಲ. ಈಗ ಅದನ್ನು ಪೂರ್ಣಗೊಳಿಸಿ ನಂತರ ಹಂತ ಹಂತವಾಗಿ ಹೆಚ್ಚುವರಿ ಅನುದಾನ ತರಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಡಾ| ಬಿ.ಆರ್‌. ಶೆಟ್ಟಿ ಅವರು ಇಲ್ಲಿನ ಆಸ್ಪತ್ರೆಗೆ ಕೊಡುಗೆ ನೀಡುವುದಾದರೆ ಅವರಿಗೆ ಕನಿಷ್ಠ 2 ಎಕರೆ ಜಾಗ ಕೊಟ್ಟರೆ ಕಟ್ಟಡ ನಿರ್ಮಾಣ ಮತ್ತು ಆಸ್ಪತ್ರೆ ನಿರ್ವಹಣೆ ಎರಡನ್ನೂ ಅವರೇ ಮಾಡುತ್ತಾರೆ. ಈ ಸಂಬಂಧ ನಾವು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ. ಇದಕ್ಕೂ ಮುನ್ನ ನಗರದಲ್ಲಿ ಪಿಡಬ್ಲು ್ಯಡಿ ಜಾಗ ಪರಿಶೀಲಿಸುತ್ತಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚಿಸಿ ನಂತರ ಯೋಜನೆ ಇಟ್ಟುಕೊಂಡು ಅಭಿವೃದ್ಧಿಪಡಿಸಲು ಆಲೋಚನೆ ಮಾಡಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಡಾ| ಬಿ.ಆರ್‌.ಶೆಟ್ಟಿ ಅವರು ನಿರ್ವಹಿಸುತ್ತಿರುವ ಉಡುಪಿಯ ಆಸ್ಪತ್ರೆ ಪರಿಶೀಲಿಸಿದ ನಿಯೋಗದಲ್ಲಿದ್ದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಿ.ಆರ್‌. ಪ್ರೇಮ್‌ಕುಮಾರ್‌ ಮಾತನಾಡಿ, ಅಲ್ಲಿನ ಆಸ್ಪತ್ರೆ ಅತ್ಯಂತ ವ್ಯವಸ್ಥಿತವಾಗಿದೆ. ಆಸ್ಪತ್ರೆಗೆ ಬರುವ ಪ್ರತಿ ರೋಗಿ ನಯಾಪೈಸೆ ಖರ್ಚಿಲ್ಲದೆ ಎಲ್ಲ ರೀತಿಯ ಪರೀಕ್ಷೆ, ಚಿಕಿತ್ಸೆ ಪಡೆದು ಹೊರಬರುತ್ತಾರೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರತಿದಿನ 40 ರಿಂದ 50 ಹೆರಿಗೆಗಳಾಗುತ್ತವೆ. ವ್ಯವಸ್ಥಿತ ಮಕ್ಕಳ ಕೇಂದ್ರ, ಐಸಿಯು ಎಲ್ಲವೂ ಇದೆ ಶಾಸಕರ ಸೂಚನೆ ಮೇರೆಗೆ ಅಲ್ಲಿಗೆ ಭೇಟಿ ನೀಡಿ ವರದಿ ತಯಾರಿಸಿದ್ದೇವೆ. ಆ ರೀತಿಯ ಆಸ್ಪತ್ರೆ ಇಲ್ಲೂ ಬಂದಲ್ಲಿ ಅಪಘಾತ, ಆತ್ಮಹತ್ಯೆಗೆ ಯತ್ನ, ಹೃದಯಾಘಾತ ಇನ್ನಿತರೆ ತುರ್ತು ಚಿಕಿತ್ಸೆಗಳಿಗೆ ಬೇರೆಡೆಗೆ ಕಳಿಸದೇ ಇಲ್ಲೇ ಚಿಕಿತ್ಸೆ ನೀಡಲು ಸಹಕಾರಿ ಆಗುತ್ತದೆ ಎಂದರು.

ಇದೇ ವೇಳೆ ಜಿಲ್ಲಾ ಸರ್ಜನ್‌ ಕುಮಾರ ನಾಯಕ್‌, ಡಾ| ಲೋಹಿತ್‌, ತಾಪಂ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ ಮತ್ತಿತರರೊಂದಿಗೆ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿ ಲಭ್ಯವಿರುವ ಜಾಗದ ಬಗ್ಗೆ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next