Advertisement

ಕೃಷಿ ಇಲಾಖೆಯಿಂದ ಪರಿಶೀಲನೆ ; ಸರಿಯಾದ ದಾಖಲೆ ನಿರ್ವಹಿಸದ ಅಂಗಡಿಗಳಿಗೆ ಬೀಗ-ನೋಟಿಸ್‌ ಜಾರಿ

02:18 PM Aug 01, 2020 | mahesh |

ಸಿರುಗುಪ್ಪ: ನಗರದ ವಿವಿಧ ರಸಗೊಬ್ಬರ, ಕೀಟನಾಶಕ, ಬೀಜ ಮಾರಾಟ ಅಂಗಡಿಗಳ ಮೇಲೆ ಜಿಲ್ಲಾ ಕೃಷಿ ಇಲಾಖೆಯ ಜಿಲ್ಲಾ ಜಾಗೃತಿ ದಳದ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಮತ್ತು ದಾಸ್ತಾನು ಪರಿಶೀಲನೆ ನಡೆಸಿ ಅಂಗಡಿ ಮಾಲೀಕರಿಂದ ಮಾಹಿತಿ ಪಡೆದುಕೊಂಡರು. ಸರಿಯಾದ ದಾಖಲೆ ನಿರ್ವಹಿಸದ ಅಂಗಡಿಗಳಿಗೆ ಬೀಗ ಹಾಕಿ ನೋಟಿಸ್‌ ಜಾರಿ ಮಾಡಿದರು.

Advertisement

ನಂತರ ಸುದ್ದಿಗಾರರೊಂದಿಗೆ ಜಿಲ್ಲಾ ಉಪ ಕೃಷಿ ನಿರ್ದೇಶಕ ಸಿ.ಆರ್‌. ಚಂದ್ರಶೇಖರ್‌ ಮಾತನಾಡಿ, ವಿವಿಧ ರಸಗೊಬ್ಬರ ಕಂಪನಿಗಳಿಂದ ಮಾರಾಟಗಾರರು ಖರೀದಿಸಿದ ರಸಗೊಬ್ಬರವನ್ನು ನೇರವಾಗಿ ರೈತರಿಗೆ ಮಾರಾಟ ಮಾಡಬೇಕು. ರೈತರಿಗೆ ಮಾರಾಟ ಮಾಡಿದ ಸಂಪೂರ್ಣ ವಿವರವನ್ನು ದಾಖಲಿಸಬೇಕು ಮತ್ತು ಈ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಗೊಬ್ಬರ ಖರೀದಿಸಿದ ಮತ್ತು ರೈತರಿಗೆ ಮಾರಾಟ ಮಾಡಿದ ಹಾಗೂ ಉಳಿದ ದಾಸ್ತಾನಿನ ಬಗ್ಗೆ ಮಾಹಿತಿಯನ್ನು ಪರಿಶೀಲನೆ ಮಾಡಲಾಗುತ್ತಿದೆ.

ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಯೂರಿಯಾ ಮಾರಾಟ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆಯೂ ದೂರುಗಳು
ಬಂದಿದ್ದು ರೈತರ ಪಾಲಿನ ಯೂರಿಯಾವನ್ನು ಸೀಮಾಂಧ್ರ ಪ್ರದೇಶದ ರೈತರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದಾರೆನ್ನುವ ದೂರುಗಳ ಹಿನ್ನೆಲೆಯಲ್ಲಿ ನಗರದ 8 ಪ್ರಮುಖ ಸಗಟು ರಸಗೊಬ್ಬರ ಮಾರಾಟ ಅಂಗಡಿಗಳ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ.

ರಸಗೊಬ್ಬರ ಕಂಪನಿಗಳಿಂದ ತಾಲೂಕಿಗೆ ಸರಬರಾಜಾಗಿರುವ ರಸಗೊಬ್ಬರದ ಮಾಹಿತಿಯೊಂದಿಗೆ ಸಗಟು ರಸಗೊಬ್ಬರ ಮಾರಾಟದ ಅಂಗಡಿಗಳ ದಾಖಲೆ ಪರಿಶೀಲಿಸಲಾಗುತ್ತಿದೆ. ರಸಗೊಬ್ಬರ ಮಾರಾಟಗಾರರು ಪಿವಿಎಸ್‌ ಮಿಷನ್‌ ಗಳಲ್ಲಿ ರೈತರಿಂದ ಬೆರಳಚ್ಚು, ಆಧಾರ್‌ ಕಾರ್ಡ್‌ ಲಿಂಕ್‌ ಪಡೆದು ಮಾರಾಟ ಮಾಡಿದ ವಿವರ ಹಾಗೂ ದಾಸ್ತಾನಿಗೆ ಹೊಂದಾಣಿಕೆ ಪರಿಶೀಲಿಸಲಾಗುತ್ತಿದ್ದು, ಇದರಲ್ಲಿ ವ್ಯತ್ಯಾಸ ಕಂಡುಬಂದರೆ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದರೆ ಹಾಗೂ ದಾಸ್ತಾನು ವಹಿ ಇಡದೇ ರೈತರಿಗೆ ಅಧಿಕೃತವಾಗಿ ನೀಡಿದ ರಸೀದಿಯಲ್ಲಿ ರೈತರ ಸಹಿ ಪಡೆಯದೇ ಇರುವುದು ಕಂಡುಬಂದರೆ ಅಂತಹ ಅಂಗಡಿ ಮಾಲೀಕರಿಗೆ ನೋಟಿಸ್‌ ನೀಡಿ ಪರವಾನಗಿಯನ್ನು ತಾತ್ಕಾಲಿಕವಾಗಿ ತಡೆಹಿಡಿದು ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.

ಮಾರಾಟಗಾರರು ಅಂಗಡಿಗಳ ಫಲಕದಲ್ಲಿ ಬೀಜ, ಕೀಟನಾಶಕ, ರಸಗೊಬ್ಬರಗಳ ದರಪಟ್ಟಿ ಹಾಗೂ ದಾಸ್ತಾನು ವಿವರ ಪ್ರದರ್ಶಿಸದೇ ಇರುವ ಮತ್ತು ಪರವಾನಗಿಯನ್ನು ನವೀಕರಿಸಿಕೊಳ್ಳದೇ ಇರುವ ಅಂಗಡಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಸಹಾಯಕ ಕೃಷಿ ನಿರ್ದೇಶಕ ನಜೀರ್‌ ಅಹಮ್ಮದ್‌, ಜಿಲ್ಲಾ ಜಾಗೃತಿ ದಳದ ಅಧಿಕಾರಿಗಳಾದ ಕೆ. ನಾಗರಾಜ, ಮುಜಬಿರ್‌ ರಹೆಮಾನ್‌, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸೌಮ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next