ಹಾವೇರಿ: ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಕಳೆದ 3-4ತಿಂಗಳಿಂದ ಕೂಲಿ ನೀಡದೆ ಇರುವುದನ್ನು ಖಂಡಿಸಿ ಕೂಲಿಕಾರ್ಮಿಕರು ಬುಧವಾರ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದರು. ವಿವಿಧ ಕೂಲಿಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ ನೂರಾರು ಕೂಲಿ ಕಾರ್ಮಿಕರು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾಮಿರ್ಕರಿಗೆ 3-4ತಿಂಗಳಿಂದ ಕೂಲಿ ನೀಡಿಲ್ಲ. ಇದರಿಂದ ಕೂಲಿ ಕಾರ್ಮಿಕರು ಜೀವನ ನಿರ್ವಹಣೆಗೆ ಹೆಣಗಾಡುವಂತಾಗಿದೆ. ಬರಗಾಲದ ಪರಿಸ್ಥಿತಿಯಲ್ಲಿ ಬದುಕು ಕಟ್ಟಿಕೊಳ್ಳಲು ಅನಿವಾರ್ಯವಾಗಿ ಜನರು ಮತ್ತೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಇದಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರವೇ ಹೊಣೆ ಎಂದು ಪ್ರತಿಭಟನಾಕಾರರು ದೂರಿದರು.
ಕಾರ್ಮಿಕರ ಇಲಾಖೆಯಿಂದ ಉದ್ಯೋಗ ಖಾತ್ರಿಯಲ್ಲಿ 90 ದಿನ ಕೆಲಸ ಮಾಡಿದ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ನೀಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ಇಲ್ಲಿಯವರೆಗೆ ಕಾರ್ಮಿಕ ಕಾರ್ಡ್ ವಿತರಣೆ ಕ್ರಮ ಕೈಗೊಂಡಿಲ್ಲ. ಕೂಡಲೇ ಕಾರ್ಮಿಕ ಇಲಾಖೆಯಿಂದ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬರಗಾಲದ ಹಿನ್ನೆಲೆಯಲ್ಲಿ ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 50 ದಿನ ಹೆಚ್ಚುವರಿ ಕೆಲಸ ನೀಡುತ್ತಿಲ್ಲ. ಕೃಷಿ, ತೋಟಗಾರಿಕೆ ಇಲಾಖೆ ಮೂಲಕ ಖಾತ್ರಿ ಯೋಜನೆಯಡಿ ರೈತರ ಜಮೀನುಗಳ ಅಭಿವೃದ್ಧಿ ಕೆಲಸವನ್ನು ಕೂಲಿ ಕಾರ್ಮಿಕರಿಂದ ಮಾಡಿಸಿದ್ದು, ಈ ವರೆಗೂ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ನೀಡಿಲ್ಲ. ಅಲ್ಲದೇ ಕೂಲಿ ಕಾರ್ಮಿಕರಿಗೆ ಆರೋಗ್ಯ ಇಲಾಖೆಯಿಂದ ನೀಡುವ ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾನ್ ಕಾರ್ಡ್‌ಗಳ ವಿತರಣೆ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಸೂಕ್ತ ಕ್ರಮ ಕೈಗೊಂಡು ಕೂಲಿ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ, ಷೋಷಣೆಯನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಹಸೀನಾ ಹೆಡಿಯಾಲ, ಶಂಕ್ರಯ್ಯ ಕಳಸೂರಮಠ, ಬೀರಪ್ಪ ಗೋಡೆರ, ಚಂದ್ರಶೇಖರ ಕಜ್ಜೇರ, ಕಾಂತಪ್ಪ ಹರಿಜನ, ಮಾಲತೇಶ ಭೂತಣ್ಣನವರ, ಚಂದ್ರವ್ವ ಲಮಾಣಿ, ನೇತ್ರವ್ವ ಹಿರೇಮಠ, ತಿರಕಪ್ಪ ಹರಿಜನ, ದ್ಯಾಮಕ್ಕ ಹರಿಜನ, ಯಲ್ಲಪ್ಪ ಹುಳಿಬುತ್ತಿ, ಶೇಖಪ್ಪ ಡಮ್ಮಳ್ಳಿ, ಚನಬಸಪ್ಪ ಚಿಕ್ಕಪ್ಪನವರ, ಹನುಂತಪ್ಪ ಬ್ಯಾಡಗಿ ಇತರರು ಇದ್ದರು.