ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ ರಾಜ್ಯದ ಅತೀ ಎತ್ತರದ ಪ್ರದೇಶ, ಶೋಲಾಕಾಡು, ಹುಲ್ಲುಗಾವಲಿನಿಂದ ಕೂಡಿರುವ ಸೂಕ್ಷ್ಮ ಪರಿಸರವಾಗಿದೆ. ವಾರಾಂತ್ಯದಲ್ಲಿ ಬರುವ ಪ್ರವಾಸಿಗರು ಭೇಟಿ ನೀಡಿ ಸಾಕಷ್ಟು ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದು, ಪ್ರವಾಸಿ ವಾಹನಕ್ಕೆ ಕಡಿವಾಣ ಹಾಕಬೇಕೆಂದು ಜಿಲ್ಲಾ ವನ್ಯಜೀವಿ ಗೌರವ ಪರಿಪಾಲಕ ಜಿ. ವೀರೇಶ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರು, ಜೀಪು, ಮಿನಿಬಸ್ ಸೇರಿದಂತೆ ಹಲವು ವಾಹನಗಳು ಮುಳ್ಳಯ್ಯನಗಿರಿಯಲ್ಲಿ ಜಮಾವಣೆ ಗೂಂಡು ಸಮಸ್ಯೆ ಸೃಷ್ಟಿಸಿವೆ. ಗಿರಿಪ್ರದೇಶದ ರಸ್ತೆಗಳು ವಾಹನಗಳಿಂದ ನಿತ್ಯ ಟ್ರಾಪಿಕ್ ಜಾಮ್ ಆಗುತ್ತಿದ್ದು, ಸುತ್ತಮುತ್ತಲ ಗ್ರಾಮಸ್ಥರಿಗೆ ನಿತ್ಯ ಕಿರಿಕಿರಿ ಉಂಟುಮಾಡುತ್ತಿದೆ ಎಂದು ತಿಳಿಸಿದ್ದಾರೆ. ಮುಳ್ಳಯ್ಯನಗಿರಿಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡಿ ಸಾಕಷ್ಟು ತೊಂದರೆ ಆಗುತ್ತಿದೆ.
ಸಾವಿರಾರು ವಾಹನಗಳು ಇಲ್ಲಿ ನಿಲ್ಲಲು ಸ್ಥಳ ಇಲ್ಲ. ಈ ವಾಹನಗಳ ಸಂಚಾರದಿಂದ ಇಲ್ಲಿನ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಮತ್ತು ಅವುಗಳ ವಾಸಸ್ಥಾನಕ್ಕೂ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸೀತಾಳಯ್ಯನಗಿರಿ ಪ್ರದೇಶದಲ್ಲೂ ಇದೇ ಪರಿಸ್ಥಿತಿ ಇದ್ದು, ಪ್ರವಾಸಿಗರು ಬೆಟ್ಟಗಳ ಮೇಲೆ ಹೋಗಿ ಮೋಜುಮಸ್ತಿ ಮಾಡುತ್ತಾ ನೈಸರ್ಗಿಕ ಹುಲ್ಲುಗಾವಲು ಮತ್ತು 12ವರ್ಷಗಳಿಗೊಮ್ಮೆ ಹೂ ಬಿಡುವ ಕುರಂಜಿ ಗಿಡಗಳಿಗೂ ಹಾನಿಯಾಗುತ್ತಿದೆ. ಪರಿಸರ ಪ್ರವಾಸೋದ್ಯಮ ಇಂದು ಸ್ಥಳೀಯರಿಗೆ ಮಾರಕವಾಗಿ ಪರಿಣಮಿಸಿದ್ದು ರಾಶಿ ರಾಶಿ ಕಸ ಗಿರಿ ಸುಂದರ ವಾತಾವರಣವನ್ನು ಕಲುಷಿತ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಮುಳ್ಳಯ್ಯನಗಿರಿ, ಇನಾಂ ದತ್ತಪೀಠ, ಮಾಣಿಕ್ಯಧಾರ ಪದೇಶಗಳಿಗೆ ಪ್ರವಾಸಿ ವಾಹನ ಸಂಚಾರ ನಿರ್ಬಂಧಿಸಿ ಜಿಲ್ಲಾಡಳಿತ ವತಿಯಿಂದ ಸರ್ಕಾರಿ ವಾಹನಗಳ ವ್ಯವಸ್ಥೆ ಕಲ್ಪಿಸಬೇಕು. ಕೈಮರದಲ್ಲಿ ಸರ್ಕಾರಿ ಭೂಮಿ ಗುರುತಿಸಿ ಅಲ್ಲಿ ಪ್ರವಾಸಿ ವಾಹನಗಳ ನಿಲುಗಡೆ ಅವಕಾಶ ಕಲ್ಪಿಸಬೇಕು. ಸರ್ಕಾರಿ ಸ್ವಾಮ್ಯದ ವಾಹನಗಳು ಅಥವಾ ಖಾಸಗಿ ಅವರಿಂದ ವಾಹನಗಳಿಗೆ ಟೆಂಡರ್ ಕರೆದು ವಾಹನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಉದ್ಯಾನದ ಜಾಗವನ್ನು ಅತಿಕ್ರಮಣ ಮಾಡಿ ಕಟ್ಟಿದ್ದ ಮನೆ, ಕಾಂಪೌಂಡ್ ನೆಲಸಮ
ಈ ಹಿಂದೆ ಕೆಎಸ್‌ಆರ್‌ಟಿಸಿ ಮಿನಿ ಬಸ್‌ಗೆ ಸಂಚಾರ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಚಿಂತನೆ ನಡೆಸಿತ್ತು. ಆದರೆ ಅದು ಕಾರ್ಯಗತಗೊಂಡಿಲ್ಲ, ಈ ವ್ಯವಸ್ಥೆಯನ್ನು ಕಲ್ಪಿಸುವುದರಿಂದ ಸರ್ಕಾರಕ್ಕೂ ಆದಾಯವಾಗಲಿದೆ ಎಂದು ತಿಳಿಸಿರುವ ಅವರು, ಸ್ಥಳೀಯರಿಗೂ ಅನುಕೂಲವಾಗುತ್ತದೆ ಮತ್ತು ಪರಿಸರ ರಕ್ಷಣೆ ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.