Advertisement

ಟೋಲ್‌ ಗೇಟ್‌ ರದ್ಧತಿಗೆ ಒತ್ತಾಯ

03:51 PM Dec 07, 2019 | Suhan S |

ಬೈಲಹೊಂಗಲ: ಹಿರೇಬಾಗೇವಾಡಿಸವದತ್ತಿ ಬೈಲಹೊಂಗಲ ಮಾರ್ಗವಾಗಿ ನಿರ್ಮಾಣಗೊಂಡ ನೂತನ ರಸ್ತೆಗೆ ಟೋಲ್‌ ಸಂಗ್ರಹ ಪ್ರಾರಂಭದ ವಿರುದ್ಧ ಬೀದಿಗಿಳಿದು ಹೋರಾಡಿದ ರೈತರ, ವಿವಿಧ ಕನ್ನಡಪರ ಸಂಘಟನೆಗಳ ಪ್ರತಿಭಟನೆಗೆ ಮನಿದ ಅಧಿಕಾರಿಗಳು ಶುಕ್ರವಾರ ಸಭೆ ನಡೆಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿ ಸಭಾ ಭವನದಲ್ಲಿ ಶುಕ್ರವಾರ ಉಪವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷಕ ಪ್ರದೀಪ ಗುಂಟೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡರು, ಗುತ್ತಿಗೆದಾರರು, ವಕೀಲರು, ವೈದ್ಯರು, ಆಟೋ ಚಾಲಕರು, ಸಾರ್ವಜನಿಕರು ಪಾಲ್ಗೊಂಡು ತಮ್ಮ ಅಳಲು ತೊಡಿಕೊಂಡು ಟೋಲ್‌ ಗೇಟ್‌ ಸಂಪೂರ್ಣವಾಗಿ ರದ್ಧುಗೊಳಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಜಿಪಂ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ಹಳ್ಳಿಗಳನ್ನು ಜೋಡಿಸುವ ಹಿರೇಬಾಗೇವಾಡಿ, ಸವದತ್ತಿ ರಸ್ತೆಗೆ ಎರಡು ಟೋಲ್‌ ನಿರ್ಮಿಸುವ ಮೂಲಕ ಈ ಭಾಗದ ಜನರ ಜೇಬಿಗೆ ಕತ್ತರಿ ಹಾಕುವುದು ಸರಿಯಲ್ಲ. ಇದನ್ನು ಕೂಡಲೇ ರದ್ಧುಗೊಳಿಸಬೇಕು ಎಂದರು.

ಸವದತ್ತಿ ಎಪಿಎಂಸಿ ಸದಸ್ಯ ಎಫ್‌.ಎಸ್‌.ಸಿದ್ಧನಗೌಡರ ಮಾತನಾಡಿ, ಅಪೂರ್ಣಗೊಂಡಿರುವ ರಸ್ತೆಗೆ ಟೋಲ್‌ ಹಾಕುವುದು ನ್ಯಾಯ ಸಮ್ಮತವಲ್ಲ. ರಸ್ತೆ ಪೂರ್ಣಗೊಂಡ ನಂತರ ಬೈಲಹೊಂಗಲ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಾಯಿತ ವಾಹನಗಳಿಗೆ ಸಂಪೂರ್ಣವಾಗಿ ಟೋಲ್‌ ನಿಂದ ಮುಕ್ತಿ ನೀಡಬೇಕು. ಗ್ರಾಮೀಣ ಈ ರಸ್ತೆಗೆ ಟೋಲ್‌ ರದ್ಧುಗೊಳಿಸಲು ಜನಪ್ರತಿನಿಧಿ ಗಳು, ಸರ್ಕಾರ ಗಮನ ಹರಿಸಬೇಕು. ಇಲ್ಲದಿದ್ದರೆ ಕೊಲ್ಲಾಪುರದಲ್ಲಿ ಟೋಲ್‌ ಕಿತ್ತು ಹಾಕಿದ ಹಾಗೆ ಇಲ್ಲಿಯೂ ಟೋಲ್‌ ಕಿತ್ತು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಪಂ ಮಾಜಿ ಸದಸ್ಯ ಬಿ.ಎಂ.ಚಿಕ್ಕನಗೌಡರ ಮಾತನಾಡಿ, ಆನಿಗೋಳ ಗ್ರಾಮದಿಂದ ಸವದತ್ತಿಯವರೆಗೆ ನಿರ್ಮಾಣವಾದ ರಸ್ತೆಯ ಜಾಗೆ ಕೃಷಿ ಭೂಮಿಗಳಾಗಿದ್ದು, ಇಲ್ಲಿಯವರೆಗೆ ಸಹಿತ ರೈತರ ಹೆಸರಿನಲ್ಲಿದ್ದು, ಕಂದಾಯ ಇಲಾಖೆಯ ದಾಖಲೆಗಳಲ್ಲಿ ರಸ್ತೆಯ ಕುರುಹಗಳೇ ಇಲ್ಲವೆಂಬುವುದನ್ನು ದಾಖಲೆ ಸಮೇತ ಅಧಿಕಾರಿಗಳೆದುರು ತೆರೆದಿಟ್ಟರು. ಉಪವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷಕ ಪ್ರದೀಪ ಗುಂಟೆ ಮಾತನಾಡಿ, ಬೈಲಹೊಂಗಲ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೊಂದಾಯಿತ ವಾಹನಗಳಿಗೆ ಸಂಪೂರ್ಣ ವಿನಾಯಿತಿ ನೀಡುವ ಕುರಿತು ಕೆ.ಆರ್‌.ಡಿ.ಸಿ.ಎಲ್‌. ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಕೆ.ಆರ್‌.ಡಿ.ಸಿ.ಎಲ್‌.ಅ ಧಿಕಾರಿ ಎಂ.ಕೆ. ಕುರುವಂಧಕರ ಮಾತನಾಡಿ, ಡಿ. 7ರಂದು ಪ್ರಾರಂಭವಾಗಬೇಕಿದ್ದ ಟೋಲ್‌ ಗೇಟ್‌ ತಾತ್ಕಾಲೀಕವಾಗಿ ಮುಂದೂಡಿದ್ದು, ಡಿ. 10ರೊಳಗೆ ಮತ್ತೂಮ್ಮೆ ಸಾರ್ವಜನಿಕರ ಸಭೆ ಕರೆದು ನಿರ್ಣಯ ತಿಳಿಸಲಾಗುವುದು ಎಂದರು.

Advertisement

ಭಾರತೀಯ ಕೃಷಿಕ ಸಮಾಜ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕಮತ, ಉದ್ಯಮಿ ವಿಜಯ ಮೆಟಗುಡ್ಡ, ತಾಪಂ ಸದಸ್ಯ ಜಗದೀಶ ಬೂದಿಹಾಳ, ವಕೀಲರಾದ ದುಂಡೇಶ ಗರಗದ, ಶಶಿಧರ ಚಿಕ್ಕೋಡಿ, ಶಿವು ಕೋಲಕಾರ,ಸಂತೋಷ ಹಡಪದ, ಉಮೇಶ ಗೌರಿ ಮಾತನಾಡಿದರು. ಡಾ.ಚಿದಂಬರ ಕುಲಕರ್ಣಿ, ವಕೀಲ ಸಂಘದ ಉಪಾಧ್ಯಕ್ಷ ಕೆ.ಎಸ್‌.ಕುಲಕರ್ಣಿ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ಬಂಡಿವಡ್ಡರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next