Advertisement

ಕೋಟೆ ಮೇಲ್ಭಾಗದಲ್ಲಿ ವಿದ್ಯುತ್‌ ದೀಪ ಅಳವಡಿಕೆಗೆ ಒತ್ತಾಯ

11:35 AM Jan 11, 2019 | |

ಚಿತ್ರದುರ್ಗ: ಐತಿಹಾಸಿಕ ಕೋಟೆ ಮೇಲ್ಭಾಗದಲ್ಲಿ ಹತ್ತಾರು ದೇವಸ್ಥಾನಗಳಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ದೇವಸ್ಥಾನಗಳಿಗೆ ದೀಪ ಅಳವಡಿಸುವಂತೆ ಒತ್ತಾಯಿಸಿ ಭಕ್ತರು ಹಾಗೂ ಸಾರ್ವಜನಿಕರು ಕೋಟೆ ಸಮೀಪ ಗುರುವಾರ ಪ್ರತಿಭಟನೆ ನಡೆಸಿದರು. ನಂತರ ಪುರಾತತ್ವ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಮೇಲುದುರ್ಗದಲ್ಲಿ (ಕೋಟೆ ಮೇಲ್ಭಾಗ) ಏಕನಾಥೇಶ್ವರಿ, ಗಣೇಶ, ಬನಶಂಕರಿ, ಹಿಡಂಬೇಶ್ವರಿ, ಸಂಪಿಗೆ ಸಿದ್ದೇಶ್ವರ, ವೇಣುಗೋಪಾಲಸ್ವಾಮಿ, ಆಂಜನೇಯಸ್ವಾಮಿ, ಕಾಶಿ ವಿಶ್ವನಾಥಸ್ವಾಮಿ, ಮುರುಘಾಮಠ ಸೇರಿದಂತೆ ಮತ್ತಿತರ ದೇವಸ್ಥಾನಗಳು, ಗುಡಿ ಗೋಪುರಗಳಿವೆ. ನಿತ್ಯ ಪೂಜೆ, ಪುನಸ್ಕಾರ ಮಾಡಲು ಮತ್ತು ಭಕ್ತರು, ಸಾರ್ವಜನಿಕರು ದೇವಸ್ಥಾನಗಳಿಗೆ ಬಂದು ಹೋಗಲು ವಿದ್ಯುತ್‌ ದೀಪಗಳ ಅವಶ್ಯಕತೆ ಇದೆ. ಆದ್ದರಿಂದ ಕೂಡಲೇ ಮೇಲುದುರ್ಗದ ಎಲ್ಲ ದೇವಸ್ಥಾನಗಳಿಗೆ ಬೀದಿದೀಪಗಳನ್ನು ಪುರಾತತ್ವ ಇಲಾಖೆಯವರು ಅಳವಡಿಸಬೇಕು ಎಂದು ಒತ್ತಾಯಿಸಿದರು.

ಕೋಟೆ ಆವರಣ ಸೇರಿದಂತೆ ವಿವಿಧ ದೇವಸ್ಥಾನಗಳ ಬಳಿ 2006ರಲ್ಲಿ ಬಣ್ಣ ಬಣ್ಣದ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿತ್ತು. ಭಾರತೀಯ ಸರ್ವೇಕ್ಷಣ ಪುರಾತತ್ವ ಇಲಾಖೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ವಿದ್ಯುತ್‌ ದೀಪ ಅಳವಡಿಸಿದ್ದವು. ಪುರಾತತ್ವ ಇಲಾಖೆ ವತಿಯಿಂದ 3, 4, 5 ಮತ್ತು 6ನೇ ಸುತ್ತಿನ ಕೋಟೆಗಳಿಗೆ ಪ್ರತಿಫಲನ ನೀಡುವ ವಿದ್ಯುತ್‌ ದೀಪ ಅಳವಡಿಸಲಾಗಿತ್ತು. ಅಲ್ಲದೆ ವಿದ್ಯುತ್‌ಗಾಗಿ ಜನರೇಟರ್‌ ಬಳಸಿ ದೀಪ ಬೆಳಗಿಸಿ ರಾತ್ರಿ ಕೋಟೆ ಪ್ರದೇಶದ ಸೌಂದರ್ಯವವನ್ನು ಹೆಚ್ಚಿಸಲಾಗಿತ್ತು. ವಿದ್ಯುತ್‌ ದೀಪ ಅಳವಡಿಸಿದ ಸಂದರ್ಭದಲ್ಲಿ ಪ್ರತಿ ನಿತ್ಯ ಸಂಜೆ 6 ರಿಂದ 9 ಗಂಟೆವರೆಗೆ ದೀಪಗಳು ಬೆಳಗುತ್ತಿದ್ದವು ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಪ್ರತಿಫಲನ ನೀಡುವ ನೂರಾರು ವಿದ್ಯುತ್‌ ದೀಪಗಳನ್ನು ಕಾಂಕ್ರಿಟ್ ಬುನಾದಿ ಹಾಕಿ ಶಕ್ತಿಯುತ ಬಲ್ಬ್ಗಳನ್ನು ನೆಲದಾಳದಲ್ಲಿ ವೈರ್‌ಗಳ ಸಂಪರ್ಕ ಬಳಸಿ ಅಳವಡಿಸಿತ್ತು. ಬೆಟ್ಟದ ಏಳನೇ ಸುತ್ತಿನ ಕೋಟೆ, ಗಣಪತಿ ದೇವಸ್ಥಾನ, ಏಕನಾಥೇಶ್ವರಿ ದೇವಸ್ಥಾನ, ದೀಪಸ್ತಂಭಗಳು, ಟಂಕಸಾಲೆ ಆವರಣ, ಹಿಡಂಬೇಶ್ವರ ದೇವಸ್ಥಾನ, ಮುರುಘಾಮಠ, ಸಂಪಿಗೆ ಸಿದ್ದೇಶ್ವರ ದೇವಸ್ಥಾನ, ಅಕ್ಕ-ತಂಗಿಯರ ಹೊಂಡ, ಗೋಪಾಲಸ್ವಾಮಿ ದೇವಸ್ಥಾನ ಇತ್ಯಾದಿ ಸ್ಥಳಗಳಲ್ಲಿ ಅಳವಡಿಸಿತ್ತು. ಇದರಿಂದಾಗಿ ಸಾಕಷ್ಟು ಮಂದಿ ಪ್ರವಾಸಿಗರು ಬರುತ್ತಿದ್ದರು. ಅಲ್ಲದೆ 2006 ರಲ್ಲಿ ಅಂದಿನ ಜಿಲ್ಲಾಧಿಕಾರಿ ಕೆ. ಅಮರನಾರಾಯಣ ಮತ್ತಿತರರ ಪ್ರಯತ್ನದಿಂದಾಗಿ ಬೆಟ್ಟದ ಮೇಲಿನ ದೀಪಗಳು ಬೆಳಗಿದ್ದವು ಎಂದು ಪುರಾತತ್ವ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿಗಳಿಗೆ ಮನವರಿಕೆ ಮಾಡಿದರು.

ಏಕನಾಥೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ದೊರೆಸ್ವಾಮಿ, ಪ್ರಧಾನ ಅರ್ಚಕ ವಿ. ಮೃತ್ಯುಂಜಯಮೂರ್ತಿ,‌ ಜೆ. ಹನುಮಂತಪ್ಪ, ಮಲ್ಲಿಕಾರ್ಜುನ್‌, ಎಚ್. ತಿಮ್ಮಣ್ಣ, ರಾಮಜ್ಜ, ಗೌಡ್ರು ಗುರುಸಿದ್ದಪ್ಪ, ಓಂಕಾರ್‌, ಗಿರೀಶ್‌, ಕಿರಣ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

ವಿದ್ಯುತ್‌ ಸಂಪರ್ಕ ಸ್ಥಗಿತದಿಂದ ತೊಂದರೆ

ಈ ಹಿಂದೆ ಕೋಟೆ ಮೇಲ್ಭಾಗದಲ್ಲಿರುವ ಎಲ್ಲ ದೇವಸ್ಥಾನಗಳಿಗೆ ವಿದ್ಯುತ್‌ ಲೈನ್‌ ಮತ್ತು ದೀಪಗಳನ್ನು ಅಳವಡಿಸಲಾಗಿತ್ತು. ಇತ್ತೀಚೆಗೆ ವಿದ್ಯುತ್‌ ಸಂಪರ್ಕ ಕಡಿತ ಮಾಡಲಾಗಿದೆ. ಪ್ರತಿನಿತ್ಯ ಬೆಳಗಿನ ಜಾವ ನಾಲ್ಕೈದು ಗಂಟೆಗೆ ಪೂಜಾ ಕೈಂಕರ್ಯಗಳು ಆರಂಭವಾದರೆ ರಾತ್ರಿ 10ರ ತನಕ ನಾನಾ ರೀತಿಯ ಪೂಜೆ, ಪುಷ್ಪಾಲಂಕಾರ, ವಾರದ ಪೂಜೆ ನಿರಂತರವಾಗಿ ನಡೆಯುತ್ತಿರುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಪೂಜಾ ಕಾರ್ಯಗಳಿಗೆ ಬೆಳಿಗ್ಗೆ, ಸಂಜೆ, ರಾತ್ರಿ ಸಮಯದಲ್ಲಿ ಬರುತ್ತಾರೆ. ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕಾಗಿರುವುದರಿಂದ ಪುರಾತತ್ವ ಇಲಾಖೆ ಕಡ್ಡಾಯವಾಗಿ ವಿದ್ಯುತ್‌ ದೀಪದ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next