ಹೊಸಪೇಟೆ: ರಾಜ್ಯದ ಎಲ್ಲ ರೈತ ಸಂಘಟನೆಗಳು ಒಗ್ಗೂಡುವ ಮೂಲಕ ರೈತರ ನಿರ್ಲಕ್ಷ್ಯ ಮಾಡುತ್ತಿರುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಅರಳಿಹಳ್ಳಿ ಗುರುಪಾದ ದೇವರ ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ವಿಜಯನಗರ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಶನಿವಾರ ಸಮಗ್ರ ನೀರಾವರಿ ಯೋಜನೆ ಜಾರಿಗಾಗಿ ಒತ್ತಾಯಿಸಿ ಹಮ್ಮಿಕೊಂಡಿದ್ದ ಪಾದಯಾತ್ರೆ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಪ್ರತಿಯೊಂದನ್ನು ಕೇಳಿ ಪಡೆಯುವ ಹಾಗೂ ಹೋರಾಟ ಮಾಡಿ ಪಡೆಯುವಂತ ಪರಿಸ್ಥಿತಿ ಈ ದೇಶದ ಅನ್ನದಾತರಿಗೆ ಬಂದೋದಗಿದೆ. ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ, ರೈತರ ಸಾಲವನ್ನು ಮನ್ನಾ ಮಾಡಿತ್ತು. ಈ ಸರ್ಕಾರಕ್ಕೆ ರೈತರ ಬಗ್ಗೆ ಕಿಚ್ಚಂತ್ತು ಕಾಳಜಿ ಇಲ್ಲ. ರೈತ ಸಂಘಟನೆಗಳು ಎಲ್ಲವೂ ಒಗ್ಗೂಡಿ ರೈತ ವಿರೋಧಿ ಸರ್ಕಾರಕ್ಕೆ ಪಾಠ ಕಲಿಸಬೇಕಿದೆ ಎಂದು ಹೇಳಿದರು.
Related Articles
ರೈತ ಮುಖಂಡ ಜೆ.ಎನ್.ಕಾಳಿದಾಸ್ ಮಾತನಾಡಿ, ಹಸಿರು ಶಾಲು ಹಾಕಿಕೊಂಡವರ ಬಗ್ಗೆ ರಾಜ್ಯದ ಜನರು ಅನುಮಾನ ದೃಷ್ಟಿಯಿಂದ ನೋಡುವಂತಾಗಿದೆ. ರೈತರ ಬಗ್ಗೆ ಕಳಕಳಿ ಹಾಗೂ ಜವಬ್ದಾರಿ ಇದ್ದರೆ, ಮಾತ್ರ ಹಸಿರು ಶಾಲು ಧರಿಸಿ, ಇಲ್ಲವಾದಲ್ಲಿ ಅದನ್ನು ಮುಟ್ಟಬೇಡಿ ಎಂದ ಮನವಿ ಮಾಡಿದರು.
ವಿಜಯನಗರ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಕಿಚಡಿ ಕೊಟ್ರೇಶ್ ಮಾತನಾಡಿ, ನೂತನ ವಿಜಯನಗರ ಜಿಲ್ಲೆ ಆರು ತಾಲೂಕುಗಳಲ್ಲಿ ಸಮಗ್ರ ನೀರಾವರಿ ಯೋಜನೆ ಜಾರಿಯಾಗಬೇಕು. ತುಂಗಭದ್ರಾ ಜಲಾಶಯ ನಿರ್ಮಾಣ ಸಮಯದಲ್ಲಿ ನೂರಾರು ಹಳ್ಳಿಗಳು ಮುಳಗಡೆಯಾಗಿವೆ. ಅವರ ತ್ಯಾಗದಿಂದ ವಿಜಯ ನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಜಾರಿಯಾಗಿವೆ ಎಂಬುದನ್ನು ಯಾರೊಬ್ಬರೂ ಮರೆಯಬಾರದು ಎಂದರು.
ಉತ್ತಂಗಿ ಕೊಟ್ಟೂರೇಶ್ವರ ಸಂಸ್ಥಾನ ಮಠದ ಶ್ರೀ ಸೋಮಶಂಕರ ಮಹಾಸ್ವಾಮಿಗಳು, ನಂದಿಪುರ ಮಠದ ಶ್ರೀ ಮಹೇಶ್ವರ ಸ್ವಾಮೀಜಿ, ಹಾಲಶಂಕರ ಸ್ವಾಮೀಜಿ, ಗದ್ದಿಕೇರಿ ಷಡಕ್ಷರಿ ಸ್ವಾಮೀಜಿ, ರೈತ ಮುಖಂಡರಾದ ಸಿ.ಎ. ಗಾಳೆಪ್ಪ, ಕಲಾಳ್ ಪರಸಪ್ಪ, ಮಹೇಶ್ ದೇವರಮನೆ, ತಿಮ್ಮಲಾಪುರ ಪ್ರಕಾಶ್, ಹತ್ತಿ ಅಡಿವೆಪ್ಪ, ಶಂಷದ್ ಬೇಗಂ, ಎ.ಹೇಮಾನ್, ಮುತ್ತಾವಲಿ, ಫಕೃದ್ದೀನ್ ಹಾಗೂ ವಿಜಯಕುಮಾರ್ ಇನ್ನಿತರರಿದ್ದರು.
ಪಾದಯಾತ್ರೆ
ತುಂಗಭದ್ರಾ ಜಲಾಶಯದಿಂದ ಎಲ್ಲ ತಾಲೂಕುಗಳಲ್ಲಿ ಸಮಗ್ರ ನೀರಾವರಿ ಯೋಜನೆ ಕೈಗೊಳ್ಳುವಂತೆ ಆಗ್ರಹಿಸಿ, ವಿಜಯನಗರ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಮೇ 21ರಿಂದ 28ರ ವರೆಗೆ 168 ಕಿಮೀ ಪಾದಯಾತ್ರೆ ರೈತರು ಹಮ್ಮಿಕೊಂಡಿದ್ದರು.
ಹರಪನಹಳ್ಳಿಯಿಂದ ಹಡಗಲಿ, ಹಗರಿಬೊಮ್ಮಹಳ್ಳಿ, ಕೂಡ್ಲಿಗಿ, ಕೊಟ್ಟೂರು ಮೂಲಕ ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಸಂಪನ್ನವಾಯಿತು. ವಿಜಯನಗರ ಜಿಲ್ಲೆ ಮಠಾಧೀಶರು, ರೈತ ಬಾಂಧವರು ಪಾದಯಾತ್ರೆ ಭಾಗವಹಿಸಿದ್ದರು.