Advertisement

ಆರೋಪಿಗಳ ಗಡಿಪಾರಿಗೆ ಒತ್ತಾಯ

12:04 PM Feb 21, 2019 | Team Udayavani |

ಲಿಂಗಸುಗೂರು: ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಸಿಆರ್‌ಪಿಎಫ್‌ನ 40ಕ್ಕೂ ಹೆಚ್ಚು ಯೋಧರು ಹತ್ಯೆಯಾಗಿದ್ದಕ್ಕೆ ಮಸ್ಕಿ ತಾಲೂಕಿನ ತಲೇಖಾನ್‌ ಗ್ರಾಮದಲ್ಲಿ ಸಂಭ್ರಮಾಚರಣೆ ಮಾಡಿದ್ದನ್ನು ಖಂಡಿಸಿ ವಿವಿಧ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಲಿಂಗಸುಗೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ವಿವಿಧ ಸಂಘಟನೆಗಳು ಕರೆ ನೀಡಿದ್ದ ಲಿಂಗಸುಗೂರು ಬಂದ್‌ ಬೆಂಬಲಿಸಿ ಕೆಲ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿದ್ದರೆ, ಮತ್ತೆ ಕೆಲವರು ವ್ಯಾಪಾರ ವಹಿವಾಟು ನಡೆಸಿದರು. ಬಸ್‌ ಸಂಚಾರ ಸಹಜವಾಗಿತ್ತು. ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ಪಟ್ಟಣದ ದೊಡ್ಡ ಹನುಮಂತ ದೇವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ವಿವಿಧ ಸಂಘಟನೆಗಳ ಸದಸ್ಯರು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಸ್‌ ನಿಲ್ದಾಣ ವೃತ್ತಕ್ಕೆ ಆಗಮಿಸಿ ಪಾಕಿಸ್ತಾನ್‌ ಧ್ವಜ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಉಗ್ರರ ದಾಳಿಗೆ ಯೋಧರು ಹತ್ಯೆಯಾಗಿದ್ದಕ್ಕೆ ತಲೇಖಾನ ಗ್ರಾಮದಲ್ಲಿ ಸಂಭ್ರಮಾಚರಣೆ ಮಾಡಿದ ದುಷ್ಕರ್ಮಿಗಳ ಕೃತ್ಯ ಖಂಡನೀಯ. ತಲೇಖಾನ್‌ ಗ್ರಾಮದಲ್ಲಿ 15 ಜನ ಸೇರಿ ಹಸಿರು
ಬಣ್ಣ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿ ಕೇವಲ 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಶೇಷ ತಂಡ ರಚಿಸಿ ಇನ್ನುಳಿದ ಆರೋಪಿಗಳನ್ನು ಬಂಧಿಸಿ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

ಆರೋಪಿಗಳನ್ನು ಗಡಿಪಾರು ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಮಹಿಳೆಯರ ಬಗ್ಗೆ ಅವಾಚ್ಯವಾಗಿ ನಿಂದಿಸುವ ಕೆಲಸ ನಡೆದಿದೆ. ರಾಷ್ಟ್ರಧ್ವಜ ಅವಮಾನಿಸುವ, ದೇಶದ ವಿರುದ್ಧ ಘೋಷಣೆಗಳನ್ನು ಹಾಕುವ ಪ್ರಸಂಗಗಳು ನಡೆಯುತ್ತಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಎಬಿವಿಪಿ, ಹಿಂದೂ ಜಾಗರಣಾ ವೇದಿಕೆ, ಬಿಜೆಪಿ ನಗರ ಘಟಕ, ಭಜರಂಗದಳ, ಖೋಖೋ ಬಾಯ್ಸ, ಸ್ವಾಮಿ ವಿವೇಕಾನಂದ ಸಂಘ, ಎಸ್‌ಎಲ್‌ಟಿ ಬಾಯ್ಸ, ಎಸ್‌ಬಿ ಗೆಳೆಯರ ಬಳಗ, ಬಾಪೂಜಿ ಸಂಘ, ಕರವೇ, ನಮ್ಮ ಕರವೇ, ಜೈ ಕರ್ನಾಟಕ, ವಕೀಲರ ಸಂಘ, ಸೌಥ್‌ ಇಂಡಿಯನ್‌ ಕರಾಟೆ ಅಸೋಸಿಯೇಶನ್‌ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದವು.

Advertisement

ಚೆನ್ನಬಸವ ಹಿರೇಮಠ, ಹನುಮಂತ, ಹನುಮೇಶ ಸರಾಫ, ಪರಶುರಾಮ ಸಾವಜಿ, ಹುಲಿಗೇಶ ನಾಯಕ, ಸೋಮಶೇಖರ, ಲಾಲಪ್ಪ ರಾಠೊಡ, ವಿಶ್ವನಾಥ ಆನ್ವರಿ, ಎಚ್‌.ವಿ.ಪವಾರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next