Advertisement

ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಒತ್ತಾಯ

09:20 PM Mar 17, 2020 | Lakshmi GovindaRaj |

ತುಮಕೂರು: ಜಿಲ್ಲೆಯ ತೆಂಗು ಬೆಳೆಗಾರರು ಕೊಬ್ಬರಿಗೆ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರ ಕೊಬ್ಬರಿಗೆ ಬೆಂಬಲ ನೀಡುವಂತೆ ಒತ್ತಾಯಿಸಿ ಕಳೆದ ವಾರ ಧರಣಿ ನಡೆಸಿ ಪ್ರಧಾನ ಮಂತ್ರಿ ಹಾಗು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಬೆನ್ನಲ್ಲೆ ಕೇಂದ್ರ ಸರ್ಕಾರ 380 ರೂ.ಗಳ ಬೆಂಬಲ ಬೆಲೆ ಹೆಚ್ಚಳ ಘೋಷಿಸಿರುವುದು ರೈತರ ಮೂಗಿಗೆ ತುಪ್ಪ ಸವರುವ ತಂತ್ರ ವಾಗಿದೆ ಎಂದು ಮಾಜಿ ಸಂಸದ ಎಸ್‌.ಪಿ ಮುದ್ದಹನುಮೇಗೌಡ ಆರೋಪಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಂದು ಕ್ವಿಂಟಲ್‌ ಕೊಬ್ಬರಿ ಉತ್ಪಾದನೆಗೆ 20,200ರೂ ವೆಚ್ಚವಾಗಲಿದೆ. ಕೇಂದ್ರ ಘೋಷಣೆ ಮಾಡಿರುವುದು ಉತ್ಪಾದನಾ ವೆಚ್ಚಗಿಂತ ಕಡಿಮೆ ಇದೆ, ತೆಂಗು ಇಂದು ರೈತರ ಅವಶ್ಯಕ ಬೆಳೆಯಾಗಿದ್ದು, ತೆಂಗಿನ ಬೆಳೆ ಉತ್ಪಾದನೆ ಯನ್ನು ನಂಬಿರುವ ರೈತರಿಗೆ ಅನ್ಯಾಯವಾಗಲಿದೆ ಎಂದರು.

20 ಸಾವಿರ ಘೋಷಣೆಗೆ ಆಗ್ರಹ: ಈ ಭಾಗದ ರೈತರು ತಲೆತಲಾಂತರದಿಂದ ಅವಲಂಭಿಸಿರುವ ತೆಂಗು ಬೆಳೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ, ತುಮಕೂರು ಜಿಲ್ಲೆಯ ಬಹುತೇಕ ರೈತರು ತೆಂಗು ಬೆಳೆ ಅವಲಂಬಿಸಿದ್ದಾರೆ. ತೆಂಗಿಗೆ ಪರ್ಯಾಯ ಬೆಳೆಯನ್ನು ರೈತರು ಬೆಳೆಯುತ್ತಿಲ್ಲ, ಅದಕ್ಕೆ ಮಾತ್ರ ಸೀಮಿತವಾಗಿದ್ದಾರೆ, ಕೇಂದ್ರ ಸರ್ಕಾರ ಕನಿಷ್ಠ 20 ಸಾವಿರ ಬೆಂಬಲ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ರೈತರ ಶ್ರಮಕ್ಕೆ ತಕ್ಕ ಬೆಲೆ ನೀಡಿ: ಸ್ವಾಮಿನಾಥನ್‌ ವರದಿ ಪ್ರಕಾರ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿಪಡಿಸಬೇಕು. ಉತ್ಪಾದನಾ ವೆಚ್ಚಕ್ಕೆ ಕನಿಷ್ಠ ಅರ್ಧ ದಷ್ಟಾದರೂ ಬೆಂಬಲ ಬೆಲೆ ನೀಡಬೇಕು, ರೈತರ ಶ್ರಮಕ್ಕೆ ತಕ್ಕಂತೆ ಬೆಲೆ ನಿಗದಿ ಪಡಿಸಬೇಕು, ರೈತರು ಹಾಕಿದ ಬಂಡವಾಳಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಸಂಕಷ್ಟಕ್ಕೆ ಸಿಲುಕಿರುವ ರೈತರು: ಇಂದು ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆಯನ್ನು ಪುನರ್‌ ಪರಿಶೀಲಿಸಿ, ರೈತರ ಉತ್ಪಾದನಾ ವೆಚ್ಚವನ್ನು ಪರಿಗಣಿಸಿದರೆ 30 ಸಾವಿರ ಬೆಂಬಲ ನಿಗದಿಪಡಿಸಬೇಕು, ಆದರೆ ತೆಂಗು ಬೆಳೆಗಾರರನ್ನು ಉಳಿಸಲು 20 ಸಾವಿರ ಬೆಂಬಲ ಬೆಲೆ ನೀಡಬೇಕು, ರಾಜ್ಯ ಸರ್ಕಾರ ಈ ಬಗ್ಗೆ ಕೇಂದ್ರದ ಗಮನ ಸೆಳೆಯಬೇಕು ಎಂದರು.

Advertisement

ರಾಜ್ಯದ ಸಂಸದರು ಒತ್ತಾಯಿಸಿ: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್‌ ಶಾ ಅವರು ತಿಪಟೂರಿನಲ್ಲಿ ತೆಂಗುಬೆಳೆಗಾರರ ಸಮಾವೇಶದಲ್ಲಿ ಬೆಂಬಲ ಬೆಲೆ ಘೋಷಣೆ ಹಾಗೂ ನೀರಾವನ್ನು ಸಹಕಾರಿ ತತ್ವದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸುವುದಾಗಿ ಹೇಳಿದ್ದರು, ಈ ಬಗ್ಗೆ ಅಮಿತ್‌ ಶಾ ಹಾಗೂ ಪ್ರಧಾನಿ ಅವರನ್ನು ರಾಜ್ಯದ ಸಂಸದರು ಭೇಟಿ ಮಾಡಿ ಈ ಅಂಶಗಳನ್ನು ಜಾರಿಗೆ ತರಲು ಒತ್ತಾಯಿಸಬೇಕು ಎಂದು ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿದೆ ಹೇಳುತ್ತಿದ್ದಾರೆ, ಆದರೆ ಅವರು ನೀಡುವ ಬೆಂಬಲ ಬೆಲೆಯಿಂದ ರೈತರು ಉಳಿಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಸಾಂಪ್ರದಾಯಿಕವಾಗಿ ರೈತರ ಬೆಳೆಯಾಗಿರುವ ತೆಂಗನ್ನು ಉಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.  ಕಾಂಗ್ರೆಸ್‌ ಮುಖಂಡರುಗಳಾದ ಶಶಿಧರ, ರಾಯಸಂದ್ರ ರವಿಕುಮಾರ, ಆರ್‌. ಕಾಮರಾಜು, ಆಟೋರಾಜು ಸೇರಿದಂತೆ ಇತರರು ಇದ್ದರು.

ಶಾ ಕೊಟ್ಟ ಮಾತು ಉಳಿಸಿಕೊಳ್ಳಲಿ: ಜಿಲ್ಲೆಯ ತೆಂಗು ಬೆಳೆಗಾರರ ಸಂಕಷ್ಟದಲ್ಲಿದ್ದರೆ ಜಿಲ್ಲೆಯ ಆರ್ಥಿಕತೆಯ ಮೇಲೆ ಹೊಡೆತ ಬೀಳಲಿದೆ. ಈಗ ಪಾರ್ಲಿಮೆಂಟ್‌ ನಡೆಯುತ್ತಿರುವ ಈ ವೇಳೆಯಲ್ಲಿ ಅಧಿವೇಶನದಲ್ಲಿ ರಾಜ್ಯದ ಸಂಸದರು ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸುವ ನಿಟ್ಟಿನಲ್ಲಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ಅವರ ಭರವಸೆಗಳನ್ನು ನೆನಪಿಸಬೇಕು, ಅವರು ಲೋಕಸಭಾ ಚುನಾವಣೆಯ ವೇಳೆಯಲ್ಲಿ ತಿಪಟೂರಿನಲ್ಲಿ ನಡೆದಿದ್ದ ತೆಂಗು ಬೆಳೆಗಾರರ ಸಭೆಯಲ್ಲಿ ನೀಡಿದ್ದ ಭರವಸೆಗಳನ್ನು ತುಮಕೂರು ಸಂಸದರು ಅಧಿವೇಶನದಲ್ಲಿ ಮಾತನಾಡುವುದಾಗಿ ಹೇಳಿದ್ದರು, ಅವರು ಮಾತನಾಡಿ ಕೊಬ್ಬರಿ ಬೆಳೆಗೆ ಬೆಂಬಲ ಬೆಲೆ ಕೊಡಿಸಲು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next