ಹುಣಸೂರು: ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ, ಅಕ್ರಮ ಗಣಿಗಾರಿಕೆ ನಿಲ್ಲಿಸಿ, ಠಾಣೆಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಸ್ಮಶಾನ ಒತ್ತುವರಿ ತೆರವುಗೊಳಿಸಿ, ನೊಂದವರಿಗೆ ಪರಿಹಾರ ಕೊಡಿಸಿ. ಹೀಗೆ ಹಲವು ಸಮಸ್ಯೆಗಳು ಹುಣಸೂರು ಡಿವೈಎಸ್ಪಿ ಕಚೇರಿಯಲ್ಲಿ ಆಯೋಜಿಸಿದ್ದ ಉಪ ವಿಭಾಗ ಮಟ್ಟದ ಪರಿಶಿಷ್ಟಜಾತಿ, ಪಂಗಡದ ಸಭೆಯಲ್ಲಿ ದೂರುಗಳು ಕೇಳಿ ಬಂದವು.
ಬಲ್ಲೇನಹಳ್ಳಿ ಕೆಂಪರಾಜ್ ರತ್ನಪುರಿಯ ಬಸ್‌ನಿಲ್ದಾಣ, ದೇವಸ್ಥಾನವಿರುವ ಬ್ಯಾಡರಹಳ್ಳಿ ಕಾಲೋನಿ ವೃತ್ತದ ಬಾರ್ ಸ್ಥಳಾಂತರಿಸಬೇಕು ಹಾಗೂ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಇದಕ್ಕೆ ಅಬಕಾರಿ ಅಧಿಕಾರಿಗಳು ಕಾರಣವಾಗಿದ್ದು, ಅವರ ವಿರುದ್ಧ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಶವಪತ್ತೆ ಪ್ರಕರಣ: ಪಿರಿಯಾಪಟ್ಟಣ ತಾಲೂಕಿನ ಪುಡಾನಹಳ್ಳಿ ದಲಿತವ್ಯಕ್ತಿಯ ಶವ ಮೂರು ದಿನಗಳ ನಂತರ ಟಿಬೆಟ್ ಕ್ಯಾಂಪ್ ಬಳಿಯ ಜಮೀನಿನಲ್ಲಿ ಸಿಕ್ಕಿದ್ದು, ಈ ಜಮೀನು ಮಾಲಿಕರು ಬೇರೆ ಊರಿನಲ್ಲಿದ್ದಾರೆ. ಇದು ಹೇಗಾಯಿತು? ಅನಾರೋಗ್ಯ ಪೀಡಿತನಾಗಿರುವ ನನ್ನ ಸಹೋದರನ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಗ್ರಾಮದ ಜ್ಯೋತಿ ಮನವಿ ಮಾಡಿದರು.
ಐಲಾಪುರ ರಾಮು ದೊಡ್ಡ ಹರವೆ ಬಳಿಯ ಟಿಬೆಟ್ ನಿರಾಶ್ರತರ ಜಮೀನಿನಲ್ಲಿ ಸಿಕ್ಕ ದಲಿತನ ಶವದ ಬಗ್ಗೆ ಗ್ರಾಮದ ಕೆಲವರ ಮೇಲೆ ಅನುಮಾನವಿದೆ. ಹಳ್ಳಿಗಳ ದಲಿತ ಕೇರಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು, ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಕ್ಕೆ ಸ್ಪಂದಿಸಿದ ಡಿವೈಎಸ್ಪಿ ಭಾಸ್ಕರ ರೈ ಪಿರಿಯಾಪಟ್ಟಣದಲ್ಲಿ ಸಭೆ ಆಯೋಜಿಸಿ ಗ್ರಾಮಸ್ಥರ ಸಮ್ಮುಖದಲ್ಲೇ ವಿಚಾರಣೆ ಕೈಗೊಂಡು ಸತ್ಯಾಸತ್ಯತೆ ಪರಿಶೀಲಿಸಿ ಕ್ರಮವಹಿಸಲಾಗುವುದೆಂದು ಭರವಸೆ ನೀಡಿದರು.
ತಮ್ಮಡಹಳ್ಳಿ ಮಹದೇವಯ್ಯ ಹಳ್ಳಿಯಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ವಿರುದ್ಧ ಪ್ರಕರಣ ದಾಖಲಿಸಿದ್ದು, ತಾವು ಯಾವುದೇ ಕೆಲಸಕ್ಕೆ ಹೋಗದಂತಾಗಿದೆ. ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.
ಶಾಶ್ವತ ಪರಿಹಾರ ಅಗತ್ಯ: ಕಟ್ಟೆಮಳಲವಾಡಿದೇವೇಂದ್ರ ಮಾತನಾಡಿ, ಬೈಕ್‌ಗಳಲ್ಲಿ ಮದ್ಯ ಸರಬರಾಜು ಮಾಡಲಾಗುತ್ತಿದೆ ಈ ಕುರಿತು ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ನಮ್ಮೂರಿನ ಸ್ಮಶಾನದ ಪಕ್ಕದಲ್ಲಿ ಸೇತುವೆ ನಿರ್ಮಾಣ ಮಾಡಿದ್ದು, ಗುಂಡಿ ತೆಗೆದರೆ ನೀರು ಬರುತ್ತಿದ್ದು, ಶವ ಸಂಸ್ಕಾರ ನಡೆಸಲು ಆಗುತ್ತಿಲ್ಲ, ಬದಲಿ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಮುತ್ತುರಾಯನ ಹೊಸಹಳ್ಳಿಯಲ್ಲಿ ಸ್ಮಶಾನ ಭೂಮಿ ಒತ್ತುವರಿಯಾಗಿದೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಶೆಟ್ಟಹಳ್ಳಿ ಲಕ್ಕಪಟ್ಟಣ ಗಿರಿಜನ ಪುನರ್ವಸತಿ ಕೇಂದ್ರದ ಅಧ್ಯಕ್ಷ ಜೆ.ಟಿ.ರಾಜಪ್ಪ ಈ ಸಭೆಗೆ ಗಿರಿಜನ ಕಲ್ಯಾಣಾ ಕಾರಿಗಳನ್ನು ಕರೆಸಬೇಕು, ಹಾಡಿಗಳ ಮಟ್ಟದಲ್ಲೇ ಪ್ರತ್ಯೇಕವಾಗಿ ಸಭೆ ನಡೆಸಿ ಆದಿವಾಸಿಗಳ ಸಮಸ್ಯೆಗೆ ಸ್ಪಂದಿಸಬೇಕೆಂದರು. ಹನಗೋಡಿನ ಉಪ ಠಾಣೆ ಇರುವ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿಕೊಡಬೇಕೆಂದು ಕೆ.ಸ್ವಾಮಿ ಮನವಿ ಮಾಡಿದರು. ರತ್ನಪುರಿ ಪುಟ್ಟಸ್ವಾಮಿ ದಲಿತರ ಭೂಮಿ ವಿವಾದದ ವೇಳೆ ಪೊಲೀಸ್ ಠಾಣೆಗಳಲ್ಲಿ ಉಳ್ಳವರ ಪರವಾಗಿ ಕೆಲಸ ಮಾಡುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.
ಸಭೆಯಲ್ಲಿ ವೃತ್ತ ನಿರೀಕ್ಷಕರಾದ ಪೂವಯ್ಯ, ಹರೀಶ್‌ಕುಮಾರ್, ಪ್ರದೀಪ್, ಎಸ್.ಐ.ಗಳಾದ ಮಹೇಶ್, ಶಿವಪ್ರಕಾಶ್ ಡಿ.ಕುಮಾರ್, ಆನಗಟ್ಟಿದೇವರಾಜ್, ಪದ್ಮಣ್ಣೇಗೌಡ, ನಿಲುವಾಗಿಲಿನ ದಲಿತ ಮುಖಂಡರು ಮಾತನಾಡಿದರು.