Advertisement

ಕಾರವಾರದಲ್ಲಿ ಕೈಗಾರಿಕೆ ಸ್ಥಾಪಿಸಲು ಒತ್ತಾಯ

03:16 PM Nov 25, 2018 | |

ಕಾರವಾರ: ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿಮಾಡಲು ರಾಜ್ಯ ಸರಕಾರ ಕೈಗಾರಿಕೆಗಳನ್ನು ಕಾರವಾರ ಹಾಗೂ ಜಿಲ್ಲೆಯ ಇತರೆಡೆ ಸ್ಥಾಪಿಸಬೇಕೆಂದು ಆಗ್ರಹಿಸಿ ಕನ್ನಡ ವಾಟಾಳ್‌ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶನಿವಾರ ಪ್ರತಿಭಟನೆ ಮಾಡಲಾಯಿತು.

Advertisement

ಕನ್ನಡ ವಾಟಾಳ್‌ ಪಕ್ಷ ಹಾಗೂ ಜನಶಕ್ತಿವೇದಿಕೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ವಾಟಾಳ್‌ ನಾಗರಾಜ ಎತ್ತಿನ ಬಂಡಿ ಏರಿ ಜನರ ಗಮನ ಸೆಳೆದರು. ನಗರದ ಪ್ರಮುಖ ಬೀದಿಯಲ್ಲಿ ಸಾಗಿದರು.

ಉದ್ಯೋಗಕ್ಕಾಗಿ ಕೈಗಾರಿಕೆ ಸ್ಥಾಪನೆ, ಮರಳುಗಾರಿಕೆ ಸಮಸ್ಯೆ ನಿವಾರಣೆ ಮುಂತಾದ ಬೇಡಿಕೆ ಹೊತ್ತ ಭಿತ್ತಿಪತ್ರ ಸೇರಿದಂತೆ, ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಮೆರವಣಿಗೆಯಲ್ಲಿ ಕನ್ನಡ ವಾಟಾಳ್‌ ಪಕ್ಷ, ಜನಶಕ್ತಿ ವೇದಿಕೆ ಹಾಗೂ ನಾನಾ ಸಂಘಟನೆಗಳ ಕಾರ್ಯಕರ್ತರು, ಪದಾಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಳಿಕ ಪ್ರತಿಭಟನಾಕಾರರನ್ನುದ್ದೇಶಿಸಿ ಕನ್ನಡ ವಾಟಾಳ್‌ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್‌ ನಾಗರಾಜ ಮಾತನಾಡಿ, ರಾಜ್ಯ ಸರಕಾರ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸಚಿವ ಸಂಪುಟ ಸಭೆ ಕರೆದು, ಕಾರವಾರ ನಗರ ಸೇರಿದಂತೆ, ಸಮಸ್ತ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ತಾಂತ್ರಿಕ ತಜ್ಞರನ್ನು ಕರೆಸಿ ಕಾರವಾರ ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸೂಕ್ತ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಈ ಭಾಗದ ಯುವಕರು ಉದ್ಯೋಗಕ್ಕಾಗಿ ಗೋವಾ, ಮುಂಬೈ ಅವಲಂಬಿಸಿದ್ದಾರೆ. ವಿಶೇಷ ಸ್ಥಾನಮಾನದ ಹೈದ್ರಾಬಾದ್‌ -ಕರ್ನಾಟಕ ಮಾದರಿಯಲ್ಲಿ ಜಿಲ್ಲೆಯನ್ನು ಗುಡ್ಡಗಾಡು ಜಿಲ್ಲೆ ಎಂದು, ಕಾರವಾರವನ್ನು ಗಡಿಪ್ರದೇಶ ಎಂದು ಘೋಷಿಸಬೇಕು. ಕಾರವಾರಕ್ಕೆ ವಿಶೇಷ ಸೌಲಭ್ಯ, ಅನುದಾನ, ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗ ಮೀಸಲಾತಿ ಒದಗಿಸಬೇಕು. ಇಲ್ಲಿಯೇ ಉದ್ಯೋಗ ಸೃಷ್ಟಿಸಲು ಕನಿಷ್ಠ ಎರಡು ಸಾವಿರದಿಂದ ಮೂರು ಸಾವಿರ ಯುವಕರಿಗೆ ಉದ್ಯೋಗ ನೀಡುವ ಸಾಮರ್ಥ್ಯದ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

Advertisement

ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಸರಕಾರ ಕೂಡಲೇ ಕ್ರಮಕೈಗೊಳ್ಳದಿದ್ದರೆ ಡಿ.24 ರಂದು ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ್‌ ನಾಯಕ ಮಾತನಾಡಿ, ಕೈಗಾ ಅಣುವಿದ್ಯುತ್‌ ಸೇರಿದಂತೆ,ಐದಾರು ಜಲವಿದ್ಯುತ್‌ ಘಟಕಗಳನ್ನು ಹೊಂದಿರುವ ಜಿಲ್ಲೆಯ ಜನಸಾಮಾನ್ಯರಿಗೆ ಉದ್ಯೋಗ ನೀಡುವ ಕೈಗಾರಿಕೆ ಸ್ಥಾಪಿಸಲು ಸರಕಾರ ಮುಂದಾಗುತ್ತಿಲ್ಲ. ನಿರಂತರ ವಿದ್ಯುತ್‌ ಸರಬರಾಜು ಸೇರಿದಂತೆ, ಕೈಗಾರಿಕೋದ್ಯಮಿಗಳಿಗೆ ಬೇಕಾದ ಅನುಕೂಲ ವಾತಾವರಣ ಕಲ್ಪಿಸಬೇಕೆಂದು ಹೇಳಿದರು.

ತಾಪಂ ಸದಸ್ಯ ಸುರೇಂದ್ರ ಗಾಂವಕರ, ಅಶ್ವಿ‌ನಿ ಪೆಡ್ನೇಕರ, ಅನುಕಳಸ, ಜಾರ್ಜ್‌ ಫರ್ನಾಂಡೀಸ್‌, ಪೂರ್ಣಿಮಾ ಮಾಯೇಕರ, ಸಂಗೀತಾ ನಾಯ್ಕ, ಇಬ್ರಾಹಿಂ ಕಲ್ಲೂರು, ಅಲ್ತಾಫ್‌ ಶೇಖ್‌, ವಿಲ್ಸನ್‌ ಫರ್ನಾಂಡೀಸ್‌ ಚಂದ್ರಕಾಂತ್‌ ನಾಯ್ಕ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next