ಹುಬ್ಬಳ್ಳಿ: ಅತಿಥಿ ಉಪನ್ಯಾಸಕರು ನಾಲ್ಕು ತಿಂಗಳಿಂದ ವೇತನವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಆರ್‌ಟಿಇ ಬಾಕಿ ಬಿಡುಗಡೆ ಮಾಡದ ಪರಿಣಾಮ ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ವೇತನವಿಲ್ಲದಂತಾಗಿದ್ದು, ಸರಕಾರ ಕೂಡಲೇ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮೂರನೇ ಪತ್ರ ಬರೆದಿರುವ ಅವರು, ಮಾರ್ಚ್ ತಿಂಗಳಿನಿಂದ ಅತಿಥಿ ಉಪನ್ಯಾಸಕರಿಗೆ ವೇತನ ನೀಡಿಲ್ಲ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಸರಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತೊಂದರೆಗೀಡಾಗಿದ್ದಾರೆ.
ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಅವರೆಲ್ಲ ಜೀವನ ನಡೆಸುವುದೇ ದುಸ್ತರವಾಗಿದೆ. ಹಿಂದೆ ಅನುದಾನ ಬಿಡುಗಡೆಯಾದಾಗ 58 ಕೋಟಿ ರೂ. ವೇತನ ನೀಡಲಾಗಿದೆ. ಆದರೆ ಇನ್ನೂ 48 ಕೋಟಿ ರೂ. ವೇತನ ಬಾಕಿಯಿದೆ.
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14,228 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಜನವರಿಯಿಂದ ವೇತನ ಆಗಬೇಕಿದೆ. ವೇತನ ನೀಡಲು ಇಲಾಖೆಯಿಂದ ಅನುದಾನ ಕೇಳಿದರೂ ಸರಕಾರ ನಿರ್ಲಕ್ಷé ವಹಿಸಿರುವುದು ಸರಿಯಲ್ಲ. ಕೂಡಲೇ ಅನುದಾನ ಬಿಡುಗಡೆ ಮಾಡಿ ವೇತನ ನೀಡುವಂತೆ ಒತ್ತಾಯಿಸಿದ್ದಾರೆ.
ಖಾಸಗಿ ಶಾಲೆಗಳ ಆರ್‌ಟಿಇ ಬಾಕಿಯನ್ನು ಸರಕಾರ ಉಳಿಸಿಕೊಂಡಿರುವ ಕಾರಣ ವೇತನ ನೀಡಲು ಕಷ್ಟವಾಗಿದೆ. 275 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಇನ್ನೂ ಬಾಕಿ ಇರುವ 1,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕಾಗಿದೆ. ಸರಕಾರ ದಿನಗೂಲಿ ಕಾರ್ಮಿಕರಿಗೆ ತೋರಿದ ಕಾಳಜಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಹಾಗೂ ಅತಿಥಿ ಉಪನ್ಯಾಸಕರ ಮೇಲೂ ತೋರಬೇಕು. ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಹೊರಟ್ಟಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.