ಭಟ್ಕಳ: ಪ್ರ ವರ್ಗ-1ರಲ್ಲಿ ಬರುವ ಮೊಗೇರ ಸಮಾಜದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದಂತೆ ಉತ್ತರ ಕನ್ನಡ ಜಿಲ್ಲೆಯ ನೈಜ ಪರಿಶಿಷ್ಟ ಜಾತಿ, ಪಂಗಡಗಳ ಸಾಂವಿಧಾನಿಕ ಹಕ್ಕು ರಕ್ಷಣಾ ಒಕ್ಕೂಟದ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಧರಣಿ ನಡೆಸುತ್ತಿರುವ ಮೊಗೇರ (ಮೊಗವೀರ) ಸಮಾಜದವರು ಕರ್ನಾಟಕ ಸರಕಾರದ ಪ್ರವರ್ಗ-1ರಲ್ಲಿ ಬರುವ ಸಮುದಾಯವಾಗಿದ್ದು ಮೀನುಗಾರ ವೃತ್ತಿ ಮಾಡುವವರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ನೈಜ ಪರಿಶಿಷ್ಟ ಜಾತಿಯ ಮೊಲ ಬೇಟೆಯಾಡುವ ಮೊಗೇರ ಜಾತಿಯ ಸಮಾನ ಹೆಸರನ್ನು ದುರುಪಯೋಗ ಪಡಿಸಿಕೊಂಡು 1976ರ ಪ್ರಾದೇಶಿಕ ನಿರ್ಬಂಧ ತೆಗೆದ ನಂತರ ಭಟ್ಕಳ ತಹಶೀಲ್ದಾರರಿಗೆ ಸುಳ್ಳು ಮಾಹಿತಿ ನೀಡಿ ಕೆಲವು ಶಾಲಾ ದಾಖಲಾತಿಗಳಲ್ಲಿ ಮೊಗವೀರ ಎನ್ನುವುದನ್ನು ಮೊಗೇರ ಎಂದು ತಿದ್ದುಪಡಿ ಮಾಡಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುವ ಮೂಲಕ ನೈಜ ಪರಿಶಿಷ್ಟರಿಗೆ ದೊರೆಯಬೇಕಾದ ಸಾವಿರಾರು ಕೋಟಿ ಮೀಸಲಾತಿ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಪ್ರಾದೇಶಿಕ ನಿರ್ಬಂಧ ತೆಗೆದ ನಂತರ ಮೀನುಗಾರ ಮೊಗೇರ ಜಾತಿಯವರು ಪ.ಜಾ. ಕ್ರ.ಸಂ.78 ರಲ್ಲಿರುವ ನೈಜ ಪರಿಶಿಷ್ಟರ ಸಮಾಜ ಹೆಸರಿನ ದುರುಪಯೋಗ ಪಡಿಸಿಕೊಂಡು ಅಂದಿನ ಆಡಳಿತ ಪಕ್ಷದ ಶಾಸಕರಿಂದ ಸಕ್ಷಮ ಪ್ರಾಧಿಕಾರದ ಮೇಲೆ ಒತ್ತಡ ಹೇರಿ ಪಡೆದಿರುವ ಸುಳ್ಳು ಜಾತಿ ಪ್ರಮಾಣ ಪತ್ರವಾಗಿದೆ ಎಂದು ಆರೋಪಿಸಲಾಗಿದೆ.
ನೈಜ ಪರಿಶಿಷ್ಟರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡವರು ಕಬಳಿಸುತ್ತಿದ್ದು ಸೂಕ್ತ ಕ್ರಮಕ್ಕೆ ಸರಕಾರ ಮುಂದಾಗಬೇಕು. ಈಗಾಗಲೇ ನೀಡಲಾಗಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸಾಮೂಹಿಕವಾಗಿ ರದ್ದು ಪಡಿಸಬೇಕು, ಹೊಸದಾಗಿ ಯಾವುದೇ ಪ್ರಮಾಣ ಪತ್ರ ಕೊಡುವ ನಿರ್ಧಾರ ಮಾಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಿರಣ ಶಿರೂರ, ಉಪಾಧ್ಯಕ್ಷ ರವೀಂದ್ರ ಮಂಗಳ ಮುಂತಾದವರು ಉಪಸ್ಥಿತರಿದ್ದರು.