Advertisement

ಕಳಪೆ ವಿದ್ಯುತ್‌ ಕಂಬಗಳ ಬದಲಾವಣೆಗೆ ಒತ್ತಾಯ

02:26 PM Jun 17, 2019 | Suhan S |

ಹಾನಗಲ್ಲ: ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಕುಂದು ಕೊರತೆಗಳ ನಿವಾರಣೆ ಸಭೆ ನಡೆಯಿತು.

Advertisement

ಸಭೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿ, ಇತ್ತೀಚೆಗೆ ಬಿರುಗಾಳಿ-ಮಳೆಗೆ ತಾಲೂಕಿನೆಲ್ಲೆಡೆ ಹೊಲಗಳಲ್ಲಿ ಕಂಬಗಳು ಮುರಿದು ಬಿದ್ದು ಅನಾಹುತ ಸೃಷ್ಟಿಸುತ್ತಿವೆ. ಅಕ್ರಮ-ಸಕ್ರಮ ಯೋಜನೆಯಡಿ ರೈತರ ಹೊಲಗಳಲ್ಲಿ ಅಳವಡಿಸಲಾಗಿರುವ ವಿದ್ಯುತ್‌ ಕಂಬಗಳ ಗುಣಮಟ್ಟ ಕಳಪೆಯಾಗಿದ್ದು, ಎಲ್ಲೆಂದರಲ್ಲಿ ಮುರಿದು ಬೀಳುತ್ತಿವೆ. ಇದರಿಂದಾಗಿ ವಿದ್ಯುತ್‌ ನಿಲುಗಡೆಯಾಗಿ ರೈತ ಸಮುದಾಯಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಗುಣಮಟ್ಟದ ಕಂಬಗಳನ್ನು ಪೂರೈಸುವಂತೆ ಒತ್ತಾಯಿಸಿದರು.

ತಾಲೂಕಿನ ಯಾವುದಾದರೊಂದು ಭಾಗದಲ್ಲಿ ಕಾಮಗಾರಿ ನಡೆಸಬೇಕಿದ್ದರೂ ಎಲ್ಲ ಕಡೆಯ ವಿದ್ಯುತ್‌ ನಿಲುಗಡೆ ಮಾಡಬೇಕಾಗುವುದು. ಹೀಗಾಗಿ ಅನವಶ್ಯಕವಾಗಿ ರೈತರು ವಿದ್ಯುತ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗುತ್ತದೆ. ಕ್ಷೇತ್ರವಾರು ವಿಂಗಡಣೆ ಮಾಡಿ ಕೆಲಸ ಕೈಗೊಳ್ಳಿ, ಇಲ್ಲದಿದ್ದರೆ ರೈತ ಸಮುದಾಯದ ಗಮನಕ್ಕೆ ತಂದು ಕಾಮಗಾರಿ ಕೈಗೊಳ್ಳಿ ಎಂದು ಆಗ್ರಹಿಸಿದ ಅವರು, ಬೈಚವಳ್ಳಿ, ಕೊಪ್ಪರಸಿಕೊಪ್ಪ, ಕರಗುದರಿ ಫೀಡರ್‌ಗಳನ್ನು ಪ್ರತ್ಯೇಕಿಸಿದರೆ ಈ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಸಲಹೆ ನೀಡಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಅಕ್ರಮ-ಸಕ್ರಮದ ಯೋಜನೆಯಡಿ ಇತ್ತೀಚೆಗೆ 5880 ಜನ ರೈತರು ಅರ್ಜಿ ಸಲ್ಲಿಸಿದ್ದಾರೆ. ಅವರೆಲ್ಲರೂ ತಾತ್ಕಾಲಿಕವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದಾರೆ. ಹೆಚ್ಚುವರಿ ಒತ್ತಡದಿಂದಾಗಿ ಟ್ರಾನ್ಸ್‌ಫರ್ಮರಗಳು ಸುಟ್ಟುಹೋಗುತ್ತಿವೆ. ಆದರೆ, ಅವುಗಳನ್ನು ಬದಲಿಸಲು ಯಾರೂ ಕೈಜೋಡಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿಗದಿತ ಕೊಳವೆಬಾವಿಗಳಿಗೆ ಮಾತ್ರ ವಿದ್ಯುತ್‌ ಸಂಪರ್ಕ ಕಲ್ಪಿಸಿ. ಇನ್ನು ವಿದ್ಯುತ್‌ ಜಾಗ್ರತ ದಳದ ಸಿಬ್ಬಂದಿ ಬೇಕಾಬಿಟ್ಟಿ ದಾಳಿ ನಡೆಸಿ ದಂಡ ಹಾಕುತ್ತಿದ್ದಾರೆ. ಅಕ್ರಮ ಜೋಡಣೆಗಳಿದ್ದಲ್ಲಿ, ಹೆಚ್ಚು ಬಳಕೆ ಮಾಡಿಕೊಂಡಲ್ಲಿ ನೋಟೀಸ್‌ ಜಾರಿ ಮಾಡಲಿ, ಕಾನೂನಿನ ಬಗ್ಗೆ ತಿಳುವಳಿಕೆ ನೀಡಲಿ. ಒಮ್ಮಿಂದೊಮ್ಮೆಲೆ ಮನಬಂದಂತೆ ದಂಡ ಹಾಕಿ ರೈತರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ಸರಿಯಾದ ಕ್ರಮವಲ್ಲ. ಇದನ್ನು ರೈತ ಸಂಘ ಖಂಡಿಸುತ್ತದೆ. ಅನೇಕ ಅಧಿಕಾರಿಗಳು ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ ಎಂದು ಆರೋಪಿಸಿದರು.

ರೈತ ಮುಖಂಡ ರುದ್ರಪ್ಪ ಬಳಿಗಾರ ಮಾತನಾಡಿ, ದೀನದಯಾಳ ಉಪಾಧ್ಯಾಯ ಹಾಗೂ ಸೌಭಾಗ್ಯ ಯೋಜನೆಯಡಿ ಅಳವಡಿಸಿರುವ ಮೀಟರ್‌ಗಳಲ್ಲಿ 6 ತಿಂಗಳಿಗೊಮ್ಮೆ ಬಿಲ್ ನೀಡುತ್ತಿರುವುದರಿಂದ ಹೆಚ್ಚು ಹಣದ ಬಿಲ್ ಬರುತ್ತಿದೆ. ಮೂರ್‍ನಾಲ್ಕು ಹಂತ ಮೀರಿದ್ದರಿಂದ ಹೆಚ್ಚು ಹಣ ಆಕರಣೆಯಾಗುತ್ತಿದೆ. ಹೀಗಾಗಿ ತಿಂಗಳಿಗೊಮ್ಮೆ ಬಿಲ್ ನೀಡುವಂತೆ ಆಗ್ರಹಿಸಿದರು.

Advertisement

ಪಟ್ಟಣದ ಮನೆಗಳಿಗೆ ಅಳವಡಿಸಲಾಗಿರುವ ಹೊಸ ಮೀಟರ್‌ಗಳಿಂದಾಗಿ ಹಳೆ ಮೀಟರ್‌ಗಳಿಗಿಂತ ಹೆಚ್ಚು ಬಿಲ್ ಬರುತ್ತಿದೆ. ನಮಗೆ ಹೊಸ ಮೀಟರ್‌ ಬೇಡ, ಹಳೆಯ ಮೀಟರ್‌ಗಳನ್ನೇ ಕೂಡ್ರಿಸಿ ಎಂದು ಸಾರ್ವಜನಿಕರಾದ ಮುಸ್ತಾಕ್‌ಅಹ್ಮದ್‌ ಸುತಾರ್‌, ಮೊಹಿದ್ದೀನ್‌ ಹಳ್ಳೂರ, ಬಾಬಾಸಾಬ ಹೊಸಪೇಟೆ, ರಜಾಕ್‌ ಮುಲ್ಲಾ, ಜಿ.ಎ.ಪಠಾಣ ಒತ್ತಾಯಿಸಿದರು.

ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರಿಸಿದ ಹೆಸ್ಕಾಂ ಅಧಿಕಾರಿ ಎಸ್‌.ಎಸ್‌.ಜಿಂಗಾಡೆ, 110 ಕೆವಿ ಸ್ಟೇಶನ್‌ನಲ್ಲಿ ಬ್ರೇಕರ್‌ ಅಳವಡಿಸಲಾಗುತ್ತಿದ್ದು, 3 ತಿಂಗಳಲ್ಲಿ ಕ್ಷೇತ್ರ ವಿಂಗಡಣೆ ಮಾಡಲಾಗುತ್ತದೆ. ಎಲ್ಲ ಸಮಸ್ಯೆಗಳನ್ನೂ ಇಲಾಖೆ ಸಿಬ್ಬಂದಿಗಳೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಎಂ.ಎಂ. ಬಡಗಿ, ಸೋಮಣ್ಣ ಜಡೆಗೊಂಡರ್‌, ರುದ್ರಪ್ಪ ಸಿಂಧೂರ, ಅಧಿಕಾರಿಗಳಾದ ಚನ್ನಪ್ಪ ದೊಡ್ಮನಿ, ಸಾಗರ ಗಣೇಶಗುಡಿ, ಎಂ.ಆರ್‌. ಸುಂಕದ, ಸಿ.ಎಸ್‌. ಅಪ್ಪಿನಬೈಲ, ಎಂ.ಎಂ. ಮುಲ್ಲಾ, ಸಿ.ಎಸ್‌. ಕುಲುಮಿ, ಎಸ್‌.ಬಿ. ವೆಂಕಣ್ಣನವರ, ಎಂ.ಬಿ. ಕೆಳಗಿನಕೇರಿ ಹಾಗೂ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next