Advertisement

ಬಾಕಿ ವೇತನ ಪಾವತಿಸಲು ಒತ್ತಾಯ

04:04 PM Aug 29, 2017 | |

ರಾಯಚೂರು: ನೂತನ ದರದಲ್ಲಿ ಆರು ತಿಂಗಳ ಬಾಕಿ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ರೈತ ಅನುವುಗಾರರ
ಸಂಘದ (ಟಿಯುಸಿಐ ಸಂಯೋಜಿತ) ಸದಸ್ಯರು ಸೋಮವಾರ ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಚೇರಿ ಎದುರು 48 ಗಂಟೆಗಳ ಧರಣಿ ನಡೆಸಿ, ಜಂಟಿ ಕೃಷಿ ನಿರ್ದೇಶಕರ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಿದರು. ಏಳು ವರ್ಷಗಳಿಂದ ರೈತ ಅನುವುಗಾರರು ಕೃಷಿ ಇಲಾಖೆ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಅತ್ಯಂತ ಕಡಿಮೆ ವೇತನವಿದ್ದರೂ
ಅದನ್ನೂ ಕೂಡಾ ಐದಾರು ತಿಂಗಳಿಗೊಮ್ಮ ಪಾವತಿಸಲಾಗುತ್ತಿದೆ. ಕನಿಷ್ಠ ವೇತನ ಕಾಯ್ದೆ, ವೇತನ ಪಾವತಿ ಕಾಯ್ದೆ, ಭವಿಷ್ಯ ನಿಧಿ ಕಾಯ್ದೆ ಹಾಗೂ ಇತರ ಕಾರ್ಮಿಕರ ಕಾನೂನುಗಳನ್ನು ಪಾಲಿಸುತ್ತಿಲ್ಲ. ವೇತನ ಹಾಗೂ ಇತರೆ ಸಾಮಾಜಿಕ ಭದ್ರತಾ ಸೌಲಭ್ಯಗಳಿಲ್ಲ ಎಂದು ದೂರಿದರು. 2015ರಿಂದ 2017ರ ಆಗಸ್ಟ್‌ ವರೆಗೆ ಕನಿಷ್ಠ ದಿನಗೂಲಿ ವೇತನದ ವ್ಯತ್ಯಾಸದ ಭತ್ಯೆ ಪಾವತಿಸಬೇಕು.
ವರ್ಷವಿಡೀ ಕೆಲಸ ನೀಡಬೇಕು. ಕನಿಷ್ಠ ವೇತನ, ಭವಿಷ್ಯ ನಿಧಿ, ಇಎಸ್‌ಐ ಪಾವತಿಸದ ಮನೀಶ ಮ್ಯಾನ್‌ ಪವರ್‌ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ಈ ಎಲ್ಲ ಸೌಲಭ್ಯಗಳನ್ನು ಇಲಾಖೆಯೇ ಪಾವತಿಸಬೇಕು ಎಂದು ಒತ್ತಾಯಿಸಿದರು. ತುಂಡು ಗುತ್ತಿಗೆ ಹಾಗೂ ತಾಂತ್ರಿಕ ಉತ್ತೇಜಕರ ಹೆಸರಿನ ಕೆಲಸ ರದ್ದುಪಡಿಸಿ ಈ ಹಿಂದಿನಂತೆ ಅನುವುಗಾರರ ಸೇವೆ ಮುಂದುವರಿಸಬೇಕು. ರೈತ
ಅನುವುಗಾರರ ಕ್ಷೇತ್ರ ಕಾರ್ಯದ ಪ್ರವಾಸದ ಭತ್ಯೆ ಪ್ರತ್ಯೇಕವಾಗಿ ನೀಡಬೇಕು. ವೇತನ ಪಾವತಿ ಕಾಯ್ದೆ ಪ್ರಕಾರ ಪ್ರತಿ ತಿಂಗಳು ಮೊದಲನೇ ವಾರದಲ್ಲಿ ವೇತನ ನೀಡಬೇಕು, ಉದ್ಯೋಗ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಟಿಯುಸಿಐ ರಾಜ್ಯಾಧ್ಯಕ್ಷ ಆರ್‌.ಮಾನಸಯ್ಯ, ಅನುವುಗಾರರ ಸಂಘದ ಜಿಲ್ಲಾಧ್ಯಕ್ಷ ತಿಮ್ಮಪ್ಪ ಜಲ್ಲಿ ಮಲಿಯಾಬಾದ್‌ ಸೇರಿ ಜಿಲ್ಲೆಯ ಅನೇಕ ರೈತ ಅನುವುಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next