Advertisement

ಕನಿಷ್ಠ ವೇತನ ಜಾರಿಗೆ ಒತ್ತಾಯ : ಮಡಿಕೇರಿಯಲ್ಲಿ ಸಿಐಟಿಯು ಪ್ರತಿಭಟನೆ

11:36 PM Jul 02, 2019 | Team Udayavani |

ಮಡಿಕೇರಿ: ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆಂಟರ್‌ ಆಫ್ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ನ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ಸರಕಾರ ಕಾರ್ಮಿಕ ವರ್ಗವನ್ನು ನಿರಂತರವಾಗಿ ಕಡೆಗಣಿಸುತ್ತಾ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಬಿ.ರಮೇಶ್‌ ಮಾತನಾಡಿ ರಾಜ್ಯ ಸರಕಾರ ನಿಗದಿಗೊಳಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದ್ದು, ಅಧಿಸೂಚನೆಯ ದಿನಾಂಕದಿಂದಲೇ ಶೇ.6 ರಷ್ಟು ಬಡ್ಡಿಯೊಂದಿಗೆ ಬಾಕಿಯನ್ನು ಪಾವತಿ ಸಬೇಕಾಗಿತ್ತು. ಆದರೆ ಅಧಿಸೂಚನೆಯಲ್ಲಿ ಗೊತ್ತುಪಡಿಸಿರುವ ವೇತನಕ್ಕಿಂತ ಕಡಿಮೆ ಮೊತ್ತವನ್ನು ನೀಡುತ್ತಿದ್ದು, ಮಾಲೀಕರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕನಿಷ್ಠ ವೇತನ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರು ಸೇರಿದಂತೆ ಗೌರವ ಧನದಲ್ಲಿ ದುಡಿಯುತ್ತಿರುವ ನೌಕರರನ್ನು ಕೂಡ ಕನಿಷ್ಠ ವೇತನ ಕಾಯ್ದೆಯಡಿ ತರಬೇಕು, ಹತ್ತು ರೂಪಾಯಿಗಳಿದ್ದ ಕಾರ್ಮಿಕ ಸಂಘದ ನೋಂದಣಿ ಶುಲ್ಕವನ್ನು ಒಂದು ಸಾವಿರ ರೂಪಾಯಿಗೆ ಏರಿಸಿರುವ ಸರಕಾರದ ಕ್ರಮವನ್ನು ವಾಪಸ್‌ ಪಡೆಯಬೇಕು.

ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಮಂಡಳಿ ಡಾ| ಅಂಬೇಡ್ಕರ್‌ ಸಹಾಯಹಸ್ತ ಯೋಜನೆಯಡಿಯಲ್ಲಿ ಮನೆ ಕೆಲಸಗಾರರು, ಟೈಲರ್‌, ಮೆಕ್ಯಾನಿಕ್‌ಗಳು, ಕ್ಷೌರಿಕರು, ಚಿಂದಿ ಆಯುವವರು ಹಾಗೂ ಚಾಲಕರಿಗೆ ಸ್ಮಾರ್ಟ್‌ಕಾಡ್‌ ನೀಡಬೇಕೆಂದು ಒತ್ತಾಯಿಸಿದರು.

Advertisement

ಕಾರ್ಮಿಕ‌ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಹಲವು ವರ್ಷಗಳಿಂದ ಬಾಕಿ ಇರುವ ಉಪಧನ ಮೊಕದ್ದಮೆಗಳ ಶೀಘ್ರ ವಿಲೇವಾರಿ ಮಾಡಲು ವಿಶೇಷ ಕ್ರಮ ಕೈಗೊಳ್ಳಬೇಕು, ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ, ತುಟ್ಟಿಭತ್ತೆ ವ್ಯವಸ್ಥೆ ಜಾರಿಗೊಳಿಸಬೇಕು, ವಿರಾಜಪೇಟೆಗೆ ಕಾರ್ಮಿಕ ಅಧಿಕಾರಿಗಳು ಹಾಗೂ ಜಿಲ್ಲೆಗೆ ಕಾರ್ಮಿಕ ನ್ಯಾಯಾಧೀಶರನ್ನು ನೇಮಿಸಬೇಕು ಎಂದು ಒತ್ತಾಯಿಸಿರುವ ಮನವಿ ಪತ್ರವನ್ನು ಪ್ರತಿಭಟನಕಾರರು ಜಿಲ್ಲಾಡಳಿತಕ್ಕೆ ನೀಡಿದರು.

ಸಿಐಟಿಯು ಜಿಲ್ಲಾ ಸಮಿತಿಯ ಅಧ್ಯಕ್ಷ ಡಾ| ಐ.ಆರ್‌.ದುರ್ಗಾಪ್ರಸಾದ್‌, ಉಪಾಧ್ಯಕ್ಷ ಎನ್‌.ಡಿ.ಕುಟ್ಟಪ್ಪ, ಖಜಾಂಚಿ ಎ.ಸಿ.ಸಾಬು, ಉಪಕಾರ್ಯದರ್ಶಿ ಪಿ.ಆರ್‌.ಭರತ್‌, ಸದಸ್ಯರಾದ ಹಮೀದ್‌, ಹರಿದಾಸ್‌ ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next