ಯಲ್ಲಾಪುರ: ಕೆಲ ದಿವಸಗಳಿಂದ ಉತ್ತರ ಕನ್ನಡ ಜಿಲ್ಲೆ ವಿಭಾಗಿಸಿ ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಪ್ರತ್ಯೇಕ ಜಿಲ್ಲೆ ಮಾಡಲಾಗುತ್ತದೆ ಎಂಬ ಚರ್ಚೆಯಾಗುತ್ತಿದೆ.
ಶಿರಸಿ ವಿಭಾಗದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಮುಖಂಡರು ಶಿರಸಿ ಜಿಲ್ಲೆ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಭೌಗೋಳಿಕವಾಗಿ ನೋಡಿದರೆ ಘಟ್ಟದ ಮೇಲಿನ ತಾಲೂಕುಗಳಿಗೆ ಬಹುತೇಕ ಯಲ್ಲಾಪುರ ಮಧ್ಯವರ್ತಿ ಸ್ಥಳವಾಗಿರುವುದರಿಂದ ಯಲ್ಲಾಪುರವನ್ನೆ ಜಿಲ್ಲಾ ಕೇಂದ್ರವಾಗಬೇಕೆಂದು ಒತ್ತಾಯ ಮಂಡಿಸುವ ಸಲುವಾಗಿ ಇಲ್ಲಿಯ ನಾಗರಿಕ ವೇದಿಕೆ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು.
ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ಅಖಂಡ ಉತ್ತರ ಕನ್ನಡ ಜಿಲ್ಲೆ ವಿಭಜಿಸಬೇಕೆಂಬ ಉದ್ದೇಶ ನಮಗಾರಿಗೂ ಇಲ್ಲ. ಆದರೆ ವಿಭಜನೆ ಖಂಡಿತ ಎಂದಾದರೆ ಜಿಲ್ಲಾ ಕೇಂದ್ರ ಯಲ್ಲಾಪುರವೇ ಆಗಬೇಕೆಂಬುದು ನಮ್ಮ ಮೂಲ ಉದ್ದೇಶ. ಎಲ್ಲ ವಿಚಾರದಲ್ಲಿಯೂ ಪ್ರತಿ ಬಾರಿ ಯಲ್ಲಾಪುರಕ್ಕೆ ಅನ್ಯಾಯವಾಗುತ್ತಿದೆ. ಮುಂದಿನ ದಿನಗಳಲ್ಲಿ
ಎಲ್ಲ ರಾಜಕಿಯ ಮುಖಂಡರು, ಧಾರ್ಮಿಕ ಮುಖಂಡರು, ಸಂಘ-ಸಂಸ್ಥೆಗಳು, ಪ್ರತಿ ಗ್ರಾಪಂ ಮುಖಂಡರು, ಸಾಹಿತಿಗಳು, ವಿಮರ್ಶಕರು, ರೈತರು, ಅಸಂಘಟಿತ ಕಾರ್ಮಿಕ ವಲಯ, ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳೂ ಸೇರಿದಂತೆ ಸಮಾಜದ ಎಲ್ಲ ಬಳಗದ ವಿಶ್ವಾಸದೊಂದಿಗೆ ಹೋರಾಟ ರೂಪಿಸಲಿದ್ದೇವೆ ಎಂದರು.
ಸಾಂಕೇತಿಕವಾಗಿ ಅ. 15ರಂದು ಬೆಳಗ್ಗೆ 11ಕ್ಕೆ ಗ್ರಾಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಹಿರಿಯರಾದ ಗಜಾನನ ನಾಯ, ನಿವೃತ್ತ ತಹಶೀಲ್ದಾರ್, ತುಳಸಿ ಪಾಲೆಕರ್, ತಾಪಂ ಅಧ್ಯಕ್ಷೆ ಭವ್ಯ ಶೆಟ್ಟಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮಹೇಶ್ ನಾಯ್ಕ, ಚಂದ್ರಕಾಂತ್ ಪಾಟಣಕರ್, ವಿನೋದ್ ತಳೇಕರ್, ಪ್ರದೀಪ್ ಯಲ್ಲಾಪುರಕರ್, ರವಿ ದೇವಾಡಿಗ, ಕೇಬಲ್ ನಾಗೇಶ್ ಇದ್ದರು.