ಸಿರುಗುಪ್ಪ: ತಾಲೂಕಿನ ಇಟಿಗಿಹಾಳು ಗ್ರಾಮದಲ್ಲಿ ತೆರೆಯಲಾದ ಮದ್ಯದಂಗಡಿ ತೆರವುಗೊಳಿಸುವಂತೆ ಒತ್ತಾಯಿಸಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಗ್ರಾಮಸ್ಥ ಆದಿನಾರಾಯಣರೆಡ್ಡಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಬೇಡಿ ಎಂದು ಇಲ್ಲಿಯವರೆಗೆ 6 ಬಾರಿ ಮನವಿ ಸಲ್ಲಿಸಿ, 3 ಬಾರಿ ರಸ್ತೆತಡೆ ನಡೆಸಿದ್ದೇವೆ. ಆದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದೇ ಮದ್ಯದಂಗಡಿ ತೆರೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥೆ ನಾಗಮ್ಮ ಮಾತನಾಡಿ, ನಮ್ಮ ಗ್ರಾಮದಿಂದ ಮದ್ಯದಂಗಡಿ ತೆರವು ಮಾಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಮದ್ಯದಂಗಡಿ ತೆರೆಯಬೇಡಿ ಎಂದು ಮನವಿ ಮಾಡಿದ್ದರೂ ಅಧಿಕಾರಿಗಳು ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ್ದು ನಮ್ಮನ್ನು ಬೀದಿಯಲ್ಲಿ ಕುಳಿತು ಪ್ರತಿಭಟನೆ ಮಾಡುವ ಹಂತಕ್ಕೆ ತಂದಿದ್ದಾರೆ. ಗ್ರಾಮದಿಂದ ಮದ್ಯದಂಗಡಿ ತೆರವು ಮಾಡಬೇಕು. ಇಲ್ಲವೆ ನಮಗೆ ವಿಷ ಕೊಡಬೇಕು, ಸರ್ಕಾರ ಇಷ್ಟೊಂದು ಮೊಂಡಾಟಕ್ಕೆ ಬಿದ್ದು ತೆರವಾದ ಮದ್ಯದಂಗಡಿಯನ್ನು ಮತ್ತೆ ತೆರೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಇದನ್ನೂ ಓದಿ:ಮುಚ್ಚಿದ ಸಕ್ಕರೆ ಕಾರ್ಖಾನೆ ಆರಂಭಿಸಿ :ಕಾರ್ಖಾನೆ ಬಂದ್‌ನಿಂದ ಸಾವಿರಾರು ಕಾರ್ಮಿಕರು ಬೀದಿಪಾಲು
ಗ್ರಾಮಸ್ಥೆ ಮಲ್ಲಮ್ಮ ಮಾತನಾಡಿ, ಮದ್ಯದಂಗಡಿಯನ್ನು ಸರ್ಕಾರ ತೆರವುಗೊಳಿಸಲು ಮುಂದಾಗದಿದ್ದರೆ ನಮ್ಮ ಗ್ರಾಮದ ಮಹಿಳೆಯರೆಲ್ಲರು ಸೇರಿ ಮದ್ಯದಂಗಡಿಯನ್ನು ಒಡೆದು ಪುಡಿ ಮಾಡುತ್ತೇವೆ. ನಮ್ಮ ಆಕ್ರೋಶ ಹೆಚ್ಚುವ ಮಟ್ಟಕ್ಕೆ ಅಬಕಾರಿ ಅಧಿ ಕಾರಿಗಳು ವರ್ತಿಸುತ್ತಿದ್ದು, ನಮ್ಮ ಸಹನೆ ಪರೀಕ್ಷೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಬಕಾರಿ ಸಿಪಿಐ ಪ್ರಹ್ಲಾದ ಸ್ಥಳಕ್ಕಾಗಮಿಸಿ ನೀವು ಕೊಟ್ಟಿರುವ ದೂರನ್ನು ನಮ್ಮ ಇಲಾಖೆ ಹಿರಿಯ ಅಧಿಕಾರಿಗಳಿಗೆ ನೀಡಿದ್ದೇವೆ ಎಂದು ಸಮಜಾಯಿಷಿ ನೀಡುತ್ತಿದ್ದಂತೆ ಆಕ್ರೋಶಗೊಂಡ ಮಹಿಳೆಯರು ನೀವೇಕೆ ಬಂದಿದ್ದೀರಿ ನಿಮ್ಮಿಂದ ಏನು ಆಗುವುದಿಲ್ಲ, ಆದ್ದರಿಂದ ಮೊದಲು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಎಚ್ಚರಿಸಿದರು.
ಆದರೂ ನೀವು ಮತ್ತೂಮ್ಮೆ ಮನವಿ ಕೊಡಿ ನಾನು ಅದನ್ನು ನಮ್ಮ ಅ ಧಿಕಾರಿಗಳಿಗೆ ನೀಡುತ್ತೇನೆ. ಮನವಿ ಕಳುಹಿಸಿಕೊಡುವುದಷ್ಟೇ ನನ್ನ ಕೆಲಸವಾಗಿದೆ, ಅದನ್ನು ಮಾಡಿದ್ದೇನೆ ಎಂದು ಅಬಕಾರಿ ಸಿಪಿಐ ಹೇಳುತ್ತಿದ್ದಂತೆ ಸಿಟ್ಟಿಗೆದ್ದ ಗ್ರಾಮಸ್ಥರು ನಿನ್ನಿಂದ ಏನು ಮಾಡಲಾಗದಿದ್ದರೆ ಏಕೆ ಬಂದಿದ್ದೀಯ, ನಿಮ್ಮ ಹಿರಿಯ ಅ ಧಿಕಾರಿಗಳನ್ನು ಕಳುಹಿಸು, ನಾವು ಇನ್ನೊಮ್ಮೆ ಯಾವುದೇ ಮನವಿ ಕೊಡುವುದಿಲ್ಲ. ಎಷ್ಟು ಬಾರಿ ನಿಮಗೆ ಮನವಿ ಕೊಡಬೇಕು, ಮನವಿ ಕೊಟ್ಟರೆ ಏನು ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಗೌರಮ್ಮ, ಮಾರೆಮ್ಮ, ಹುಲಿಗೆಮ್ಮ, ನಾರಾಯಣಮ್ಮ, ಸುಬಾನ್‌ಸಾಬ್, ಉಮಕಾಂತರೆಡ್ಡಿ, ಲೋಕನಾಥರೆಡ್ಡಿ, ರಾಮಚಂದ್ರರೆಡ್ಡಿ, ಹುಸೇನಪ್ಪ, ಗೋವಿಂದ ಇದ್ದರು.