ಕೊಪ್ಪಳ: ತುಂಗಭದ್ರಾ ಗೇಟ್ ದುರಸ್ತಿ ಹಿನ್ನೆಲೆಯಲ್ಲಿ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಿಲ್ಲ. ಕೂಡಲೇ ಲಕ್ಷಾಂತರ ರೈತರ ಭತ್ತ ಉಳಿಸಲು ಕಾಲುವೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ತಾಲೂಕಿನ ಮುನಿರಾಬಾದ್ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ವೇಳೆ ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ರೈತರೊಂದಿಗೆ ಆಟವಾಡುತ್ತಿದ್ದಾರೆ. ವಾರದ ಹಿಂದಷ್ಟೆ ಎಡದಂಡೆ ನಾಲೆಗೆ ಬೋಂಗಾ ಬಿದ್ದು, ನೀರು ಬರುವುದು ತಡವಾಗಿದೆ. ಸದ್ಯ ಮೇಲ್ಮಟ್ಟದ ಕಾಲುವೆ ಗೇಟ್ ರಿಪೇರಿ ವೇಳೆ ಮುಖ್ಯ ಕಾಲುವೆಗೆ ಧಕ್ಕೆಯಾಗಿ ನೀರು ನಿಲ್ಲಿಸಲಾಗಿದೆ. ಇದರಿಂದ ನಮ್ಮ ರೈತರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.
ಸಿ.ಎಂ. ಯಡಿಯೂರಪ್ಪ ಅವರು ಕೆಆರ್‌ಎಸ್ ಜಲಾಶಯಕ್ಕೆ ಸಣ್ಣ ಧಕ್ಕೆಯಾದರೆ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತಾರೆ. ಆದರೆ ತುಂಗಭದ್ರಾ ಜಲಾಶಯದ ವಿಷಯದಲ್ಲಿ ಮಲತಾಯಿ ಧೋರಣೆ ತಾಳುತ್ತಾರೆ. ಈ ವರ್ತನೆ ಸರಿಯಲ್ಲ. ಈ ಭಾಗದಲ್ಲಿ ಜಲಾಶಯದ ನೀರನ್ನೇ ನಂಬಿ ಲಕ್ಷಾಂತರ ರೈತರು ಜೀವನ ನಡೆಸುತ್ತಿದ್ದಾರೆ. ಸಿಎಂ ರೈತರ ಜೀವನದೊಂದಿಗೆ ಆಟವಾಡುತ್ತಿದ್ದಾರೆ. ಗೇಟ್ ಮುರಿದು ನಾಲ್ಕು ದಿನ ಗತಿಸಿದರೂ ಸಕಾಲಕ್ಕೆ ಗೇಟ್ ದುರಸ್ತಿ ಮಾಡಲಾಗಲಿಲ್ಲ. ಡ್ಯಾಂ ವಿಷಯದಲ್ಲಿ ಒಂದೇ ದಿನದಲ್ಲಿ ದುರಸ್ತಿ ಕಾರ್ಯ ನಡೆಯಬೇಕು. ಏನಾದರೂ ಹೆಚ್ಚು ಕಡಿಮೆಯದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು.
ಡ್ಯಾಂನಲ್ಲಿದ್ದ ನೀರನ್ನು ರೈತರಿಗೆ ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಗೇಟ್ ಕಿತ್ತ ಕಾರಣ ಎಡ ದಂಡೆ ಭಾಗದ ರೈತರಿಗೆ ನೀರು ಹರಿ ಬಿಟ್ಟಿಲ್ಲ. ತಕ್ಷಣವೇ ಗೇಟ್ ದುರಸ್ತಿ ಮಾಡಿಸುವುದನ್ನು ಬಿಟ್ಟು ಸಿಎಂ ಸಚಿವ ಸಂಪುಟದಲ್ಲಿ ಬ್ಯೂಸಿಯಾಗಿದ್ದಾರೆ. ವಾರದಿಂದ ನಮ್ಮ ರೈತರು ಕಷ್ಟ ಅನುಭವಿಸಿದರೂ ಚಕಾರ ಎತ್ತುತ್ತಿಲ್ಲ. ಎಡ ಭಾಗದ ಶಾಸಕರು, ಸಂಸದರು ಸುಮ್ಮನೇ ಭೇಟಿ ನೀಡುತ್ತಿದ್ದು, ಸರ್ಕಾರವನ್ನು ಒತ್ತಾಯಿಸುತ್ತಿಲ್ಲ ಎಂದು ಆರೋಪಿಸಿದರು.
ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ತುಂಗಭದ್ರಾ ಮಂಡಳಿ ಎಡ ಭಾಗದ ರೈತರನ್ನು ಕಡೆಗಣಿಸಿದೆ. ಅಲ್ಲಿನ ಅಧಿಕಾರಿಗಳು ಆಂಧ್ರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲಿನಿಂದಲೂ ಎಡ ಭಾಗವನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ ಎಂದು ಗುಡಗಿದರು. ಕಾಲುವೆ ರಿಪೇರಿ ಮಾಡಿ ನೀರು ಬಿಡಬೇಕು. ಯಾವಾಗ ನೀರು ಬಿಡಲಾಗುತ್ತದೆ ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈ ಬಿಡಲಾಗುವುದು ಎಂದು ರೈತರು ಪಟ್ಟು ಹಿಡಿದರು.
ಎಸಿ ಸಿ.ಡಿ. ಗೀತಾ ಹಾಗೂ ಟಿಬಿಪಿ ಸಿಇ ಎಸ್.ಎಚ್. ಮಂಜಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯ ವೇಳೆ ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ, ಜಿಪಂ ಸದಸ್ಯರಾದ ರಾಜಶೇಖರ್ ಹಿಟ್ನಾಳ್, ಅಮರೇಶ ಗೋನಾಳ, ತಾಪಂ ಅಧ್ಯಕ್ಷ ಬಾಲಚಂದ್ರನ್, ಮುಖಂಡರಾದ ರಡ್ಡಿ ಶ್ರೀನಿವಾಸ, ಬಸವರಾಜಸ್ವಾಮಿ ಮಳಿಮಠ, ರಾಜು ನಾಯಕ್, ಜನಾರ್ದನ ಹುಲಿಗಿ ಸೇರಿ ಇತರರು ಪಾಲ್ಗೊಂಡಿದ್ದರು.