ಬೆಳಗಾವಿ: ನಗರದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ನಿರ್ವಾಹಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಕಿರುಕುಳ ನೀಡಿದವರನ್ನು ಶೀಘ್ರವೇ ಅಮಾನತು ಮಾಡುವಂತೆ ದಲಿತ ಸಂಘಟನೆಗಳ ಕಾರ್ಯಕರ್ತರು ರವಿವಾರ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿ ಡಿಪೋಗೆ ವರ್ಗಾವಣೆಗೊಂಡಿದ್ದ ತಾಲೂಕಿನ ಕೇದನೂರ ಗ್ರಾಮದ ಆನಂದ ಹರಿಜನ (52) ಎಂಬ ನಿರ್ವಾಹಕ ಡಿಪೋ ಸಂಖ್ಯೆ2ರಲ್ಲಿ ನೇಣು ಬಿಗಿದುಕೊಂಡು ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ರವಿವಾರ ಬೆಳಗ್ಗೆ ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ದಲಿತ ಸಂಘಟನೆಯವರು ಹಾಗೂ ಸಿಬ್ಬಂದಿ ಪ್ರತಿಭಟನೆಗೆ ಮುಂದಾದರು. ಕಿರುಕುಳ ನೀಡಿದವರನ್ನು ಅಮಾನತು ಮಾಡುವವರೆಗೆ ಮೃತದೇಹ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಬೆಳಗಾವಿ ಡಿಪೋದಲ್ಲಿಯೇ ಅನೇಕ ವರ್ಷಗಳಿಂದ ಆನಂದ ಹರಿಜನ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ದಿಢೀರ್ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಸಿಬ್ಬಂದಿ ಕಿರುಕುಳದಿಂದಲೇ ನಿರ್ವಾಹಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪದೇ ಪದೇ ಕಿರುಕುಳ ನೀಡಿದ್ದರಿಂದ ನಿರ್ವಾಹಕ ಆನಂದ ಹರಿಜನ ಮನನೊಂದಿದ್ದರು. ಈ ಸಾವಿನಿಂದ ಅವರ ಕುಟುಂಬ ಅನಾಥವಾಗಿದ್ದು, ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಹರಿಜನ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು. ಕೂಡಲೇ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಭೇಟಿಯಾದರು. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬೆಳಗ್ಗೆ 7 ಗಂಟೆಯಿಂದಲೇ ಪ್ರತಿಭಟನೆ ನಡೆಸುತ್ತಿದ್ದ ದಲಿತ ಮುಖಂಡರನ್ನು ವಾಕರಸಾ ಸಂಸ್ಥೆಯ ಅಧಿಕಾರಿಗಳು ಸಮಾಧಾನ ಗೊಳಿಸಿದರೂ ಇದಕ್ಕೆ ಯಾರೂ ಕಿವಿಗೊಡಲಿಲ್ಲ. ಹಿರಿಯ ಅಧಿಕಾರಿಗಳು ಬಂದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಾಗ ಮುಖ್ಯ ಭದ್ರತಾ ಮತ್ತು ಜಾಗೃತ ಅಧಿಕಾರಿ ರಾಜೇಶ ಹುದ್ದಾರ, ಮುಖ್ಯ ತಾಂತ್ರಿಕ ಶಿಲ್ಪಿ ಪಿ.ಆರ್. ಮಹಾಜನ, ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ಭೇಟಿ ಮಾಡಿ ಸಮಾಧಾನಪಡಿಸಿದರು. ಬಳಿಕ ಸ್ಥಳದಲ್ಲಿಯೇ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ ಬಳಿಕ ಮೃತದೇಹ ತೆಗೆದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಈ ವೇಳೆ ದಲಿತ ಮುಖಂಡರಾದ ಮಲ್ಲೇಶ ಚೌಗಲೆ, ರಾಜು ಪನ್ನ್ಯಾಗೋಳ, ಮಲ್ಲೇಶ ಕುರಂಗಿ, ಎಂ.ಆರ್. ಕಲಪತ್ರಿ, ಚವ್ಹಾಣ ಸೇರಿದಂತೆ ಇತರರು ಇದ್ದರು.