ರಾಮದುರ್ಗ: ಫಸಲ್ ಬಿಮಾ ಯೋಜನೆಯಲ್ಲಿ ಅಧಿಕಾರಿಗಳ ತಪ್ಪಿನಿಂದಾಗಿ ರೈತರಿಗೆ ಮೋಸವಾಗಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ರೈತರಿಗೆ ನ್ಯಾಯ ಕಲ್ಪಿಸುವಂತೆ ಆಗ್ರಹಿಸಿ ಮುದೇನೂರ ಗ್ರಾಮಸ್ಥರು ಶಾಸಕ ಮಹಾದೇವಪ್ಪ ಯಾದವಾಡಗೆ ಮನವಿ ಸಲ್ಲಿಸಿದರು.
ಮುದೇನೂರ ಗ್ರಾಪಂ ಅಭಿವೃದ್ಧಿ ಅ ಧಿಕಾರಿ ಶೇಖರ ಹಿರೇಸೋಮನ್ನವರ ಮಾಡಿದ ಯಡವಟ್ಟಿನಿಂದಾಗಿ ಸಮೀಪದ ಆನೆಗುದ್ದಿ ಗ್ರಾಮದ ರೈತರಿಗೆ ಹಂಚಿಕೆ ಮಾಡಲಾದ ಬೆಳೆ ಹಾನಿ ಹಣ ಮುದೇನೂರ ಗ್ರಾಮಸ್ಥರ ಖಾತೆಗೆ ಜಮೆಯಾಗಿಲ್ಲ. 2018-19ನೇ ಸಾಲಿನ ಹಿಂಗಾರು ಹಂಗಾಮಿನ ಫಸಲ್ ಬಿಮಾ ಯೋಜನೆ ಪರಿಹಾರದ ಹಣ ಮುದೇನೂರ ರೈತರಿಗೆ ಬೇಕಾಬಿಟ್ಟಿಯಾಗಿ ಏಕರೆಗೆ ಕೇವಲ 1165 ಜಮೆಯಾದರೆ, ಆನೆಗುದ್ದಿ ಗ್ರಾಮದ ರೈತರ ಖಾತೆಗೆ ಏಕರೆಗೆ ಸುಮಾರು 10,800 ರೂ. ಜಮೆಯಾಗಿದೆ. ಎರಡು ಪ್ರದೇಶದ ಜಮೀನು, ಬೆಳೆಗಳು ಒಂದೆಯಾದರೂ ಪರಿಹಾರದ ಹಣ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಪ್ಯೂಚರ ಜನರಲ್ ಇಂಡಿಯಾ ಇನ್ಸೂರನ್ಸ್ ಕಂಪನಿಯೊಂದಿಗೆ ಸ್ಥಳೀಯ ಗ್ರಾಪಂ ಹಾಗೂ ವಿವಿಧ ಇಲಾಖೆಯ ಅ ಧಿಕಾರಿಗಳು ಶಾಮೀಲಾಗಿ ಬೇಕಾಬೀಟ್ಟಿಯಾಗಿ ರೈತರ ಖಾತೆಗೆ ಪರಿಹಾರ ಹಣ ಹಂಚಿಕೆ ಮಾಡಲಾಗಿದೆ. ತಾಲೂಕು ಬರಪೀಡಿತವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ಸಂಕಷ್ಟದಲ್ಲಿರುವ ರೈತರಿಗೆ ಸರಕಾರದಿಂದ ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಸಾಲಮಾಡಿ ಫಸಲ್ ಬಿಮಾ ಯೋಜನೆ ಕಂತು ಪಾವತಿ ಮಾಡಿದ್ದಾರೆ. ಆದರೆ ಅ ಧಿಕಾರಿಗಳು ಮಾತ್ರ ಆಯಾ ಪ್ರದೇಶದ ಬೆಳೆ ಹಾನಿ ಮಾಹಿತಿ ನೀಡುವಲ್ಲಿ ಮನ ಬಂದಂತೆ ವರ್ತಿಸಿ, ಬೆಳೆ ಕಟಾವು ಪ್ರಯೋಗದ ಮಾಹಿತಿ ನೀಡುವಲ್ಲಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರೈತರಿಗೆ ಆಗಿರುವ ಮೋಸದ ಕುರಿತು ತನಿಖೆ ನಡೆಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ವೇಳೆ ಗೋವಿಂದರಡ್ಡಿ ಜಾಯಿ, ರುದ್ರಗೌಡ ಪಾಟೀಲ, ಮೈಲಾರಪ್ಪ ಚಿಂಚಲಕಟ್ಟಿ, ಸಿದ್ದಪ್ಪ ಸಂಕದಾಳ, ಬಸಲಿಂಗಪ್ಪ ಹರಗುಟಗಿ, ಸಿದ್ದಪ್ಪ ಸಂಕದಾಳ, ಲಕ್ಕಪ್ಪ ಹುರಕನ್ನವರ, ಗಣಪತಿ ಬಸಿಡೋಣಿ, ಶಂಕರಗೌಡ ಚಿಕ್ಕನಗೌಡ್ರ, ಶಿವನಗೌಡ ಪವಾಡಿಗೌಡ್ರ, ಹುಸೇನಸಾಬ ಬಡೇಖಾನ, ತಿಮ್ಮಣ್ಣ ಹಕಾಟಿ, ಹಣಮಂತ ಅಂಗಡಿ ಸೇರಿದಂತೆ ಇತರರು ಇದ್ದರು.