Advertisement

ಬೇಜವಾಬ್ದಾರಿ ಶಿಕ್ಷಕರ ವರ್ಗಾವಣೆಗೆ ಒತ್ತಾಯ

03:56 PM Dec 10, 2018 | Team Udayavani |

ರಾಣಿಬೆನ್ನೂರ: ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಪಾಠ ಬೋಧಿಸುತ್ತಿಲ್ಲ. ಪರಿಣಾಮ ಮಕ್ಕಳಿಗೆ ಸರಿಯಾಗಿ ಓದಲು, ಬರೆಯಲು ಬರುವುದಿಲ್ಲ. ಶಾಲೆಯಲ್ಲಿಯೇ ಶಿಕ್ಷಕರು ಜಗಳವಾಡುತ್ತಾರೆ ಎಂಬ ಇತ್ಯಾದಿ ಆರೋಪದ ಸುದ್ದಿ ಕೇಳಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರ ಮತ್ತು ಕ್ಷೇತ್ರ ಶಿಕ್ಷಣಾಧಿ ಕಾರಿ ಎನ್‌.ಶ್ರೀಧರ ಶನಿವಾರ ಶಾಲೆಗೆ ದಿಢೀರ್‌ ಭೇಟಿ ನೀಡಿ, ಶಿಕ್ಷಕರನ್ನು ತರಾಟೆ ತೆಗೆದುಕೊಂಡ ಘಟನೆ ತಾಲೂಕಿನ ನೂಕಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

Advertisement

ನಮ್ಮ ಮಕ್ಕಳಿಗೆ ಸರಿಯಾಗಿ ಓದಲು ಬರೆಯಲು ಬರುವುದಿಲ್ಲ. 1ರಿಂದ 8ನೇ ತರಗತಿ ವರೆಗೆ ಒಟ್ಟು 212 ಮಕ್ಕಳಿದ್ದು, ಶಾಲಾ ಶಿಕ್ಷಕರು 9 ಜನರಿದ್ದರೂ ಅವರಲ್ಲಿಯೇ 3 ಪಂಗಡಗಳಾಗಿವೆ. ಇದರಿಂದ ನಮ್ಮ ಶಾಲೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಪಾಲಕರು ದೂರಿದರು.

ವಿದ್ಯಾರ್ಥಿಗಳ ಬುದ್ದಿಮಟ್ಟ ಪರೀಕ್ಷಿಸುವುದರ ಜತೆಗೆ ಪ್ರತಿ ತರಗತಿಯಲ್ಲಿ ಕ್ಲಾಸ್‌ ತೆಗೆದುಕೊಂಡು ಪಾಠ ಮಾಡಿದರು. ಒಂದು ಕೊಠಡಿಯಲ್ಲಿ ಡಿಡಿಪಿಐ ಇನ್ನೊಂದು ಕೊಠಡಿಯಲ್ಲಿ ಬಿಇಒ ಮಕ್ಕಳಿಗೆ ಮನ ಮುಟ್ಟುವಂತೆ ಬೆಳಗ್ಗೆ 8:30ರಿಂದ ಮಧ್ಯಾಹ್ನ 12:30ರ ವರೆಗೆ ಪಾಠ ಬೋಧನೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ಮಕ್ಕಳೆದುರಿಗೆ ಶಿಕ್ಷಕರು ಕಿತ್ತಾಡುತ್ತಾರೆ. ಸಮಯಕ್ಕೆ ಸರಿಯಾಗಿ ಬರುವುದಿಲ್ಲ, ಮುಖ್ಯೋಪಾಧ್ಯಾಯರ ಮಾತಿಗೆ ಯಾವ ಶಿಕ್ಷಕಕರೂ ಬೆಲೆ ಕೊಡುವುದಿಲ್ಲ. ಹೀಗಾಗಿ ಮೊದಲು ಮುಖ್ಯೋಪಾಧ್ಯಾಯ ಸೇರಿದಂತೆ ಬೇಜವಾಬ್ದಾರಿ ಶಿಕ್ಷಕರನ್ನು ಕೂಡಲೇ ಬೇರೆಡೆ ವರ್ಗಾಯಿಸಿರಿ ಎಂದು ಪಟ್ಟು ಹಿಡಿದರು. ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರೂ ಶಾಲಾ ವ್ಯವಸ್ಥೆ ಸಂಪುರ್ಣ ಹದಗೆಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಎಲ್ಲವನ್ನೂ ಆಲಿಸಿದ ಡಿಡಿಪಿಐ ಶಿಕ್ಷಕರ ಸಭೆ ಕರೆದು, ಇನ್ನು ಮುಂದೆ ಇಂತಹ ಆರೋಪಗಳು ಕೇಳಿಬರದಂತೆ ಎಚ್ಚರವಹಿಸಿ. ಶಾಲೆಯಲ್ಲಿ ಶಿಸ್ತು, ಶ್ರದ್ಧೆಯಿಂದ ಇರಬೇಕು. ಶಿಕ್ಷಕರ ಮೇಲೆ ಆರೋಪ ಪುನರಾವರ್ತನೆಯಾದರೆ ಮುಲಾಜಿಲ್ಲದೆ ಅಮಾನತುಗೊಳಿಸುವ ಎಚ್ಚರಿಕೆ ನೀಡಿದರು.

Advertisement

ತಿಂಗಳೊಳಗೆ ಶಾಲಾ ಮಕ್ಕಳು ಸುಧಾರಣೆಯಾಗಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆಯಿಸಬೇಕು. ಶಾಲೆ ಉನ್ನತೀಕರಣ ಮತ್ತು ಸೌಂದರ್ಯಿಕರಣದಿಂದ ಕೂಡಿರಬೇಕು. ಇಷ್ಟೆಲ್ಲದರ ಮಧ್ಯೆ ತಮ್ಮೊಳಗೆ ಕಿತ್ತಾಟ ಕಂಡುಬಂದರೆ ಬೇರೆ ಜಿಲ್ಲೆಗೆ ವರ್ಗಾಯಿಸಲಾಗುವುದು ಅಥವಾ ಅಮಾನತುಗೊಳಿಸಲಾಗುವುದು. ಸಮಯಕ್ಕೆ ಸರಿಯಾಗಿ ಶಾಲೆಗೆ ಆಗಮಿಸಬೇಕೆಂದು ಎಚ್ಚರಿಸಿದರು.

ಜಿಪಂ ಸದಸ್ಯ ಏಕನಾಥ ಬಾನುವಳ್ಳಿ, ಸಿಆರ್‌ಪಿ ನಟರಾಜ, ಇಸ್ಮಾಯಿಲ್‌ ಐರಣಿ, ಮಂಜಪ್ಪ ವಡ್ಡರ, ವೆಂಕಟೇಶ ದೊಡ್ಡಮನಿ, ಇಕ್ಬಾಲ್‌ಸಾಬ್‌ ರಾಣೇಬೆನ್ನೂರ, ಶಿವಾನಂದ ಹೊಸಮನಿ, ಕೃಷ್ಣಪ್ಪ ವಡ್ಡರ, ಸುರೇಶ ಮಡಿವಾಳರ, ಕುಮಾರ ಗಂಟಿ, ಕಿರಣ ಚಿಂದಿ, ಆನಂದ ದೊಡ್ಡಮನಿ ಸೇರಿದಂತೆ ಪಾಲಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next