ಮುಂಡಗೋಡ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕೆಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಕಳೆದ 95 ದಿನಗಳ ಅಹೋರಾತ್ರಿ ಸತ್ಯಾಗ್ರಹ ನಡೆಸುತ್ತಿದ್ದು ಮೇ 20 ಒಳಗೆ ಸರಕಾರ ಮೀಸಲಾತಿ ಹೆಚ್ಚಸದಿದ್ದರೆ ಎಸ್ಸಿ -ಎಸ್ಟಿ ಸಮುದಾಯದವರು ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ತಾಲೂಕು ಅಧ್ಯಕ್ಷ ರಾಘವೇಂದ್ರ ಮಳಗೀಕರ್ ಹೇಳಿದರು.
ಅವರು ರವಿವಾರ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಆಶ್ರಯದಲ್ಲಿ ತಾಪಂ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಾಲ್ಮೀಕಿ ಗುರುಪೀಠದ ಪ್ರಸನ್ನನಾಂದ ಸ್ವಾಮೀಜಿ ಅವರು ಕಳೆದ 95 ದಿನಗಳಿಂದ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸರ್ಕಾರ ದಿನವನ್ನು ಮುಂದೂಡುತ್ತಿದೆ. ಶ್ರೀಗಳು ಮಳೆ, ಬಿಸಿಲು ಗಾಳಿಯೆನ್ನದೆ ನಡು ರಸ್ತೆಯಲ್ಲಿ ಸತ್ಯಾಗ್ರಹ ನಡೆಸಿದ್ದಾರೆ. ಮೇ 20 ರಂದು100 ದಿನಗಳು ಆಗುತ್ತದೆ. ಅವರಿಗೆ ಬೆಂಬಲ ಸೂಚಿಸಿ ಅಂದು ತಾಲೂಕಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್.ಫಕ್ಕೀರಪ್ಪ ಮಾತನಾಡಿ, ನಮ್ಮಗಳ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು. ಶ್ರೀಗಳು ಕೇವಲ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೇಳುತ್ತಿಲ್ಲ. ಎಸ್ಸಿ 17.5 ಮತ್ತು ಎಸ್ಟಿಗೆ 7.5 ಮೀಸಲಾತಿ ಕೇಳುತ್ತಿದ್ದಾರೆ. ಎಸ್ಸಿಯಲ್ಲಿ 101 ಜಾತಿ ಹಾಗೂ ಎಸ್ಟಿಯಲ್ಲಿ 51 ಜಾತಿಯ ಜನರು ಇದ್ದಾರೆ. ಸರ್ಕಾರ ಇದಕ್ಕಾಗಿ ಆಯೋಗ ರಚನೆ ಮಾಡಿ ವರದಿ ನೀಡುವಂತೆ ಸೂಚಿಸಿತ್ತು.
ಅದರಂತೆ ಆಯೋಗವು ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ನೀಡಿದೆ. ಆದರೆ ಸರಕಾರ ಘೋಷಣೆ ಮಾಡದೆ ಕಾಲಹರಣ ಮಾಡುತ್ತಿದೆ. ಆದಷ್ಟು ಬೇಗೆ ಮೀಸಲಾತಿ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ಬೇಡಜಂಗಮ ಹೆಸರಿನಲ್ಲಿ ರಾಜ್ಯದಲ್ಲಿ 20ಸಾವಿರ ಜನರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಮೊಗೇರ, ಬೇಡಜಂಗಮ ಪ್ರಮಾಣಪತ್ರವನ್ನು ಪಡೆದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಸುಗ್ರೀವಾಜ್ಞೆ ಮೂಲಕ ನೈಜ ಪರಿಶಿಷ್ಟ ಜಾತಿ, ಪಂಗಡದವರ ಹಿತಾಸಕ್ತಿ ಕಾಪಾಡಬೇಕು. ಲಿಂಗಾಯತರು ಬೇಡಜಂಗಮ ಸರ್ಟಿಫಿಕೆಟ್ ಪಡೆದಿರುವುದು ಸರಿಯಿದೆ ಎಂಬ ಹೈಕೋರ್ಟ್ ತೀರ್ಪು ಆಘಾತಕಾರಿಯಾಗಿದೆ. ರಾಜ್ಯ ಸರ್ಕಾರ ಸಮರ್ಥವಾಗಿ ಸಾಕ್ಷಿ ಸಮೇತ ವಾದ ಮಾಡುವಲ್ಲಿ ವಿಫಲವಾಗಿದ್ದರಿಂದ, ಹೈಕೋರ್ಟ್‌ನಲ್ಲಿ ಇಂತಹ ತೀರ್ಪು ಬರಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದೇವೆ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಸವರಾಜ ಸಂಗಮೇಶ್ವರ, ಭೋವಿ ಸಮಾಜದ ಅಧ್ಯಕ್ಷ ಹನಮಂತ ಆರೆಗೊಪ್ಪ, ಭಜಂತ್ರಿ ಸಮಾಜದ ಹನಮಂತ ಭಜಂತ್ರಿ, ಬಂಜಾರ ಸಮಾಜದ ಶಾರದಾ ರಾಠೊಡ, ಎಸ್ಸಿ-ಎಸ್ಟಿ ನೌಕರರ ಜಿಲ್ಲಾಧ್ಯಕ್ಷ ಎಸ್.ಡಿ. ಮುಡೆಣ್ಣವರ ಮಾತನಾಡಿದರು.
ಸುದ್ದಿಗೋಷ್ಠಿಯ ಮುನ್ನ ಶ್ರೀ ಮಹರ್ಷಿ ವಾಲ್ಮೀಕಿ ಮತ್ತು ಡಾ| ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮುಖಂಡರಾದ ಗೋಪಾಲ ನಡುಕಿಮನಿ, ಜೋಜೋ ಸಿದ್ದಿ, ಲಾವಪ್ಪ ಕುರಬೇಟ್ಟ, ಗದಿಗೆಪ್ಪ ನಾಣಪೂರ, ಲಕ್ಷ್ಮಣ ದೇವರಗುಡ್ಡ, ನಾಗಪ್ಪ ನಾಣಪೂರ, ಗಂಗಾಧರ ತಳವಾರ, ಕಲ್ಲಪ್ಪ ನಾಗನೂರ, ಹನಮಂತಪ್ಪ ಕಂಬಾರ, ಪ್ರಕಾಶ ತಳವಾರ ಗಜೇಂದ್ರ ವಾಲ್ಮೀಕಿ, ಹನಮಂತ ತಳವಾರ, ಶಂಕ್ರಣ್ಣಾ ಓಣಿಕೇರಿ, ರಮೇಶ ತಳವಾರ, ಹನಮಂತ ಸಂಕ್ಲಿಪುರ ಹಾಗೂ ರಮೇಶ ತಳವಾರ ಮುಂತಾದವರು ಉಪಸ್ಥಿತರಿದ್ದರು.