Advertisement

ಮೂಲ ವಸತಿ ರಹಿತರಿಗೆ ಮೊದಲ ಆದ್ಯತೆ ನೀಡಲು ಒತ್ತಾಯ

10:35 AM Jul 30, 2019 | Suhan S |

ಗದಗ: ಹೌಸಿಂಗ್‌ ಫಾರ್‌ ಆಲ್ ಯೋಜನೆಯಡಿ ಗಂಗಿಮಡಿಯಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳ ಹಂಚಿಕೆಯಲ್ಲಿ ಅವಳಿ ನಗರದ ಮೂಲ ವಸತಿ ರಹಿತ 348 ಕುಟುಂಬಗಳಿಗೆ ಮೊದಲು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಮಹಾತ್ಮಗಾಂಧಿ ಸರ್ಕಲ್ ಬಳಿ ಜಮಾಯಿಸಿದ ಸ್ಲಂ ಜನರು ಕೆಲಕಾಲ ರಸ್ತೆ ತಡೆ ನಡೆಸಿ, ಬಳಿಕ ನಗರಸಭೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸ್ಲಂ ಜನರ ಸಮಸ್ಯೆಗಳ ಪರಿಹಾರ ಹಾಗೂ ವಸತಿ ರಹಿತರಿಗೆ ಸೂರು ಕಲ್ಪಿಸುವಲ್ಲಿ ವಿಫಲರಾಗಿರುವ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಅವಳಿ ನಗರದಲ್ಲಿ ವಾಸಿಸುತ್ತಿರುವ ಮೂಲ 348 ಬಡ ಕುಟುಂಬಗಳಿಗೆ ಮನೆಗಳನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿ ಕಳೆದ 6 ವರ್ಷಗಳಿಂದ ಜಿಲ್ಲಾ ಸ್ಲಂ ಸಮಿತಿಯಿಂದ ಹೋರಾಟಗಳನ್ನು ನಡೆಸಲಾಗುತ್ತಿದೆ. ಈ ಕುರಿತು ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಮತ್ತು ಪೌರಾಯುಕ್ತರಿಗೆ ಅನೇಕ ಮನವಿ ಸಲ್ಲಿಸಲಾಗಿದೆ. 2015ರಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ 13 ದಿನಗಳ ಕಾಲ ಧರಣಿ ನಡೆಸಲಾಗಿತ್ತು. ಧರಣಿ ಸ್ಥಳಕ್ಕೆ ಆಗಮಿಸಿದ್ದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಕೆ. ಪಾಟೀಲರು, ಸ್ಲಂ ಸಮಿತಿಯಿಂದ ನೀಡಲಾಗಿರುವ 348 ಕುಟುಂಬಗಳಿಗೆ ಮೊದಲು ಆದ್ಯತೆ ನೀಡಿ ಮನೆಗಳನ್ನು ಹಂಚಿಕೆ ಮಾಡಲಾಗುವುದೆಂದು ಭರವಸೆ ನೀಡಿದ್ದು, ಈವರೆಗೂ ಈಡೇರಿಸಿಲ್ಲ ಎಂದು ಆರೋಪಿಸಿದರು.

ಈ ಕುರಿತು ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಗಂಗಿಮಡಿ ಹತ್ತಿರ ನಿರ್ಮಿಸಲಾಗಿರುವ ಪ್ರಧಾನ ಮಂತ್ರಿಗಳ ಆವಾಸ್‌ ಯೋಜನೆಯಡಿಯ (ಹೌಸಿಂಗ್‌ ಫಾರ್‌ ಆಲ್)ಗುಂಪು ಮನೆಗಳ ವಿತರಣೆಯಲ್ಲಿ ಮೂಲ ವಸತಿ ರಹಿತರಿಗೆ ಮೊದಲ ಆದ್ಯತೆ ನೀಡಬೇಕು. ಅದರೊಂದಿಗೆ ರಾಚೋಟೇಶ್ವರ ನಗರ ಮತ್ತು ಕುರಹಟ್ಟಿಪೇಟೆ ಸ್ಲಂ ಪ್ರದೇಶದ ನಿವಾಸಿಗಳಿಗೆ ಫಾರ್‌ಂ ನಂ. 3 ವಿತರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ಜಿಲ್ಲಾಧ್ಯಕ್ಷ ಇಮ್ತಿಯಾಜ್‌ ಆರ್‌. ಮಾನ್ವಿ, ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಮಹಿಳಾ ಸಂಚಾಲಕಿ ಪರವೀನಬಾನು ಹವಾಲ್ದಾರ, ಸಂಘಟನಾ ಸಂಚಾಲಕಿ ತಮನ್ನಾ ಧಾರವಾಡ, ಮೆಹರುನಿಸಾ ಢಾಲಾಯತ, ಯುವ ಸಮಿತಿ ಸಂಚಾಲಕ ಉಸ್ಮಾನ ಚಿತ್ತಾಪುರ, ಸಂಘಟನಾ ಸಂಚಾಲಕ ರಫೀಕ್‌ ಧಾರವಾಡ, ಜಿಲ್ಲಾ ಸಮಿತಿ ಸದಸ್ಯರಾದ ಇಬ್ರಾಹಿಂ ಮುಲ್ಲಾ, ಅಬುಬಕರ ಮಕಾನದಾರ, ಮಮ್ತಾಜಬೇಗಂ ಮಕಾನದಾರ, ವಂದನಾ ಶ್ಯಾವಿ. ಕಮಲವ್ವ ಬಿದರೂರು, ಮರ್ದಾನಬಿ ಬಳ್ಳಾರಿ, ತಾಹೇರಾ ಗುಳಗುಂದಿ, ಸಲೀಂ ಢಾಲಾಯತ, ನಜೀರಅಹ್ಮದ್‌ ಹಾವಗಾರ, ವಿಶಾಲಕ್ಷಿ ಹಿರೇಗೌಡ್ರ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next