ಮಸ್ಕಿ: ರಾಜಕೀಯ ನಾಯಕರು ಹಾಗೂ ಅಧಿಕಾರಿ ವರ್ಗ ಲೋಕಸಭಾ ಚುನಾವಣೆ ಗುಂಗಿನಲ್ಲಿ ಜನರಿಗೆ ಕುಡಿಯುವ ನೀರು, ಉದ್ಯೋಗ, ಬರಗಾಲದಂತಹ ಸಮಸ್ಯೆ ಪರಿಹರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷ, ಎಐಟಿಯುಸಿ ತಾಲೂಕು ಸಮಿತಿ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಎಪಿಎಂಸಿ ಮುಂಭಾಗದಿಂದ ಆರಂಭಗೊಂಡ ಪ್ರತಿಭಟನಾ ರ್ಯಾಲಿ ಬಸವೇಶ್ವರ ನಗರದ ತಹಶೀಲ್ದಾರ್ ಕಚೇರಿಗೆ ಆಗಮಿಸಿತು. ನಂತರ ಮುಖಂಡರು ಉಪ ತಹಶೀಲ್ದಾರ್‌ಪ್ರಕಾಶ ಬುಳ್ಳಾ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಿಪಿಐ ಮುಖಂಡ ವೆಂಕನಗೌಡ ಗದ್ರಟಗಿ, ಲೋಕಸಭೆ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ. ಇದರಿಂದ ಮೂಲಭೂತ ಸೌಲಭ್ಯಗಳು ಜನರಿಗೆ ಸಿಗದಂತಾಗಿದೆ ಎಂದು ಆರೋಪಿಸಿದರು.
ಕೃಷಿ ತಜ್ಞ ಡಾ| ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ರೈತರು ಬೆಳೆದ ಬೆಳೆ ಖರ್ಚಿನ ಮೇಲೆ ಶೇ.50ರಷ್ಟು ಹೆಚ್ಚು ಬೆಲೆ ಸಿಗುವಂತಹ ನೀತಿ ರೂಪಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ 200 ದಿನ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.
ಸಿಪಿಐ ಮುಖಂಡ ತಿಪ್ಪಯ್ಯಶೆಟ್ಟಿ ಮಾತನಾಡಿ, ಮಸ್ಕಿ ತಾಲೂಕಿನಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬರ ಕಾಮಗಾರಿ ಪ್ರಾರಂಭಿಸಿ ಕಾರ್ಮಿಕರಿಗೆ ಕೆಲಸ ನೀಡಬೇಕು. ರೈತರು, ಕಾರ್ಮಿಕರು ಹಾಗೂ ಬಡವರ ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಜವಾಬ್ದಾರಿಯನ್ನು ಸರ್ಕಾರವೇ ತೆಗೆದುಕೊಳ್ಳಬೇಕು. 60 ವರ್ಷ ದಾಟಿದ ರೈತರಿಗೆ ಪ್ರತಿ ತಿಂಗಳು 3000 ಸಾವಿರ ರೂ.ಪಿಂಚಣಿ ನೀಡಬೇಕು. ರೈತರ ಕೃಷಿ, ಉಪ ಕಸಬುಗಳಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡಬೇಕು. ಅಸಂಘಟಿತ ವಲಯದ ಕೃಷಿ ಕಾರ್ಮಿಕರು ಹಾಗೂ ಬಿಸಿಯೂಟ, ಅಂಗನವಾಡಿ, ಆಟೋರಿಕ್ಷಾ ಇತರೆ ಕಾರ್ಮಿಕರಿಗೆ ನಿವೇಶನ ನೀಡಿ ಮನೆ ಕಟ್ಟಿಸಿಕೊಡಬೇಕು. ಮಸ್ಕಿಯಿಂದ ಸುರಪುರವರೆಗೆ ಚಿನ್ನದ ಗಣಿ ಆಡಳಿತ ನಿಕ್ಷೇಪ ಸರ್ವೆ ನಡೆಸಿದೆ. ಇದರಲ್ಲಿ ಜಿಲ್ಲೆಯ ಅರ್ಧಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಕೆಲಸ ಕೊಡಬಹುದು. ಅದಕ್ಕಾಗಿ ಚಿನ್ನದ ಗಣಿ ಪ್ರಾರಂಭಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಭಾರತ ಕಮ್ಯುನಿಸ್ಟ್ ಪಕ್ಷ, ಎಐಟಿಯುಸಿ ತಾಲೂಕು ಸಮಿತಿ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಎಂ.ಡಿ. ಜಾಫರಸಾಬ್, ಶಿವಮ್ಮ ಉದ್ಬಾಳ, ದೇವಮ್ಮ ಬಳಗಾನೂರು ಇತರರು ಇದ್ದರು.