Advertisement

ಖಾಲಿ ಹುದ್ದೆ ಭರ್ತಿಗೆ ಒತ್ತಡ ಹೇರಲು ಒತ್ತಾಯ

09:04 AM May 03, 2022 | Team Udayavani |

ಕಾರವಾರ: ರಾಜ್ಯ ಸರಕಾರಿ 38 ಇಲಾಖೆಗಳಲ್ಲಿ ಹಾಗೂ ವಿವಿಧ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ ಮತ್ತು ರಾಜೀನಾಮೆಯಿಂದ ಸುಮಾರು 2,50,000 ಹೆಚ್ಚು ಹುದ್ದೆಗಳು ಖಾಲಿ ಉಳಿದಿದ್ದು, ಈ ಹುದ್ದೆಗಳನ್ನು ಸರ್ಕಾರ ಬೇಗ ಭರ್ತಿಮಾಡಿಕೊಳ್ಳಲು ಸರಕಾರದ ಮೇಲೆ ಒತ್ತಡ ಹೇರುವಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರು ವಿಧಾನ ಪರಿಷತ್‌ ಎಸ್‌. ವಿ. ಸಂಕನೂರ ಅವರನ್ನು ಒತ್ತಾಯಿಸಿದ್ದಾರೆ.

Advertisement

ಸೋಮವಾರ ಧಾರವಾಡದಲ್ಲಿ ವಿವಿಧ ಇಲಾಖೆ ನೌಕರರ ಸಂಘಟನೆ ಹಾಗೂ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಸಂಕನೂರು ಅವರೊಂದಿಗೆ ಸಭೆ ನಡೆಸಿ ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಶಿಕ್ಷಣ ಸಂಸ್ಥೆ ಹಾಗೂ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನಿವೃತ್ತಿಯಾದವರ ಹುದ್ದೆ ಹಾಗೂ ರಾಜೀನಾಮೆ ನೀಡಿದ ಹುದ್ದೆಗಳು ಬಹಳ ವರ್ಷಗಳಿಂದ ಖಾಲಿ ಇವೆ. ಖಾಲಿಯಾದ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆದಿಲ್ಲ. ಹಾಗಾಗಿ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿರುವ ಕೃಷಿ, ತೋಟಗಾರಿಕೆ, ತಾಂತ್ರಿಕ ವಿಶ್ವವಿದ್ಯಾಲಯಗಳನ್ನೊಳಗೊಂಡಂತೆ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಶೇ. 50 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಇದರಿಂದ ಶಿಕ್ಷಣ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ತೊಂದರೆ ಆಗಿದೆ ಎಂದು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರ ಸಂಘದ ಪದಾಧಿಕಾರಿಗಳಾದ ಪ್ರೋ| ಎಸ್‌.ಬಿ. ಹುಂಡೆಕರ್‌ ಮತ್ತು ಡಾ|ಎಸ್‌.ಕೆ. ಮೇಲ್ಕರ ಸಭೆಯ ಗಮನಕ್ಕೆ ತಂದರು.

ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಗ್ರಾಮೀಣ ಭತ್ಯೆ ನೀಡಬೇಕು. ಹಾಗೂ ಇತ್ತೀಚೆಗೆ ರಚನೆಯಾದ ತಾಲೂಕುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಾರಂಭಿಸಲು ಒತ್ತಾಯಿಸಿದರು.

Advertisement

ಪದವಿ ಪೂರ್ವ ನೌಕರರ ಸಂಘದ ಅಧ್ಯಕ್ಷ ಎಸ್‌.ಎಲ್‌. ಶೇಖರಗೋಳ ಮಾತನಾಡಿ, ಪಿಯುಸಿ ಮೌಲ್ಯಮಾಪನ ವೇತನ 3 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡುವ ಪದ್ಧತಿ ಇದ್ದು, ಕೂಡಲೇ ಪ್ರಸ್ತುತ ವರ್ಷಕ್ಕೆ ಮೌಲ್ಯಮಾಪನ ವೇತನ ಹೆಚ್ಚಿಸಲು ಒತ್ತಾಯಿಸಿದರು.

ಕೆ.ಇ.ಬೋರ್ಡ್‌ ಕಾಲೇಜಿನ ಪ್ರಾಚಾರ್ಯ ಮೋಹನ ಸಿದ್ಧಾಂತಿ ಮಾತನಾಡಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ ಹುದ್ದೆಗಳನ್ನು ತುಂಬಿಕೊಳ್ಳಲು ಕಳೆದ 7 ವರ್ಷಗಳಿಂದ ಅನುಮತಿ ನೀಡದೆ ಇರುವುದು ದುರ್ದೈವದ ಸಂಗತಿಯಾಗಿದ್ದು, ಇದೇ ರೀತಿ ಮುಂದುವರೆದರೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತಹ ಪ್ರಸಂಗ ಬರಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಾಥಮಿಕ ಸರಕಾರಿ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷ ಗುರು ತಿಗಡಿ ಮಾತನಾಡಿ, ಧಾರವಾಡದಲ್ಲಿ ಈ ಹಿಂದೆ ಇದ್ದ ವಿದ್ಯಾಭವನ ಸಂಪೂರ್ಣ ಶಿಥಿಲಗೊಂಡಿದ್ದು ಅದರ ಪುನರ ನಿರ್ಮಾಣಕ್ಕೆ ಕ್ರಮಕೈಗೊಳ್ಳಲು ಮನವಿ ಮಾಡಿದರಲ್ಲದೇ ಪ್ರಭಾರಿ ಮುಖ್ಯೋಪಾಧ್ಯಾಯರಿಗೆ ಈ ಹಿಂದೆ ನೀಡುತ್ತಿದ್ದ ಪ್ರಭಾರ ಭತ್ಯೆಯನ್ನು ಮುಂದುವರೆಸಿಕೊಂಡು ಹೋಗಲು ಮನವಿ ಮಾಡಿದರು. ಪ್ರಾಚಾರ್ಯ ಮಾರುತಿ ಮನ್ನಿಕೇರಿ ಮಾತನಾಡಿ ಸರ್ಕಾರಿ ನೌಕರರಿಗೆ ಮಂಜೂರು ಮಾಡಿರುವ ಶಿಶುಪಾಲನಾ ರಜೆಯನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಈ ಸಂದಂರ್ಭದಲ್ಲಿ ಡಿ.ಡಿ.ಪಿ.ಯು ಕೃಷ್ಣಾ ನಾಯಕ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಿಡಿಂಕೇಟ್‌ ಸದಸ್ಯ ಪ್ರೊ| ಎಸ್‌.ವಿ. ಸವಡಿ, ಪ್ರೊ| ಎಸ್‌.ಬಿ. ಹಿರೇಮಠ, ಪ್ರೊ| ಯು.ಎಸ್‌.ರಾಯ್ಕರ, ಎಲ್‌.ಐ. ಲಕ್ಕಮ್ಮನವರ, ಅಯ್ಯಪ್ಪ ಮೋಕಾಶಿ, ಡಾ|ಬಿ.ಆರ್‌.ರಾಠೊಡ್‌, ಡಾ| ಪ್ರಲ್ಹಾದ ಯಾವಗಲ್‌, ನಂದೀಶ ಕಾಖಂಡಕಿ, ಪ್ರಾಚಾರ್ಯರುಗಳಾದ ರಂಗನಾಥ ರಂಗಣ್ಣವರ, ಪಿ. ಆರ್‌. ಪಾಟೀಲ, ಡಾ|ಸುರೇಶ ಮೂಳೆ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಉಪ್ಪಿನ, ಡಾ| ರಾಮು ಮೂಲಗಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next