ಆಳಂದ: ಕುಡಿಯುವ ನೀರು ಪೂರೈಕೆ ಹಾಗೂ ಬಡಾವಣೆಯಲ್ಲಿ ಸ್ವತ್ಛತೆ ಕೈಗೊಂಡು ಕಸವಿಲೇವಾರಿ ನಡೆಸಿ ಕಂಬಗಳಿಗೆ ವಿದ್ಯುತ್ ಬಲ್ಬಗಳನ್ನು ಅಳವಡಿಸಬೇಕು ಎಂದು ಪಟ್ಟಣದ ವಾರ್ಡ್ 23ರ ನಾಗರಿಕರು ಪುರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದರು.
ಪುರಸಭೆ ಕಾಂಗ್ರೆಸ್ ಸದಸ್ಯೆ ಕವಿತಾ ಸಂಜಯನಾಯಕ ನೇತೃತ್ವದಲ್ಲಿ ಶುಕ್ರವಾರ ಬಡಾವಣೆ ನಾಗರಿಕರು ಪುರಸಭೆ ಕಚೇರಿಗೆ ಆಗಮಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ವಾರ್ಡ್‌ನಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಬೀದಿ ಕಸ ವಿಲೇವಾರಿ ಕೈಗೊಳ್ಳದೆ ಇರುವುದರಿಂದ ಮಳೆಬಂದು ಕೆಸರು ಗದ್ದೆಯಾಗಿ ಬಡಾವಣೆಯಲ್ಲಿ ಗಬ್ಬು ವಾಸನೆ ಹರಡಿದೆ. ಇದರಿಂದ ಕ್ರಿಮಿಕೀಟ ಉತ್ಪತ್ತಿಯಾಗಿ ಸಾಂಕ್ರಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಕುರಿತು ಅಧಿಕಾರಿಗಳು, ಸಂಬಂಧಿತ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅವರು ದೂರಿದರು.
ಬಡಾವಣೆ ನಿವಾಸಿಗಳ ಸಮಸ್ಯೆ ಆಲಿಸಿದ ಪುರಸಭೆ ವ್ಯವಸ್ಥಾಪಕ ಶಂಭುಲಿಂಗ ಕನ್ನೇ ಎಸ್‌ಐ ಲಕ್ಷ್ಮಣ ತಳವಾರ ಮತ್ತು ಪಿಟರ್ ಮ್ಯಾನ್ ಚೋಟು ಅವರನ್ನು ಕರೆಯಿಸಿ ಸಕಾಲಕ್ಕೆ ನೀರು ಪೂರೈಸಬೇಕು ಹಾಗೂ ಕಸಾ ವಿಲೇವಾರಿ ಕೈಗೊಳ್ಳಬೇಕು. ಬೀದಿ ದೀಪ ಅಳವಡಿಸಬೇಕು ಎಂದು ಸೂಚನೆ ನೀಡಿದರು.
ಇನ್ನು ಮುಂದೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಶಂಭುಲಿಂಗ ಭರವಸೆ ನೀಡಿದ ಮೇಲೆ ನಾಗರಿಕರು ಹಿಂದಿರುಗಿದರು. ಮುಖಂಡರಾದ ಸಂಜಯ ನಾಯಕ, ಫಕ್ರೋದ್ದೀನ ಸಾವಳಗಿ, ತಾಹೇರ ಶೇಖ ಹಾಗೂ ಮಹಿಳೆಯರು ಈ ಸಂದರ್ಭದಲ್ಲಿದ್ದರು.