ಬೆಂಗಳೂರು: ರಾಜ್ಯದಲ್ಲಿ ಶಿಲ್ಪಕಲೆಯನ್ನೇ ಐಚ್ಛಿಕವಾಗಿ ಪಾಠ ಮಾಡುವಂತ ಕಾಲೇಜುಗಳ ಕೊರತೆ ಇದೆ. ಸರ್ಕಾರ ಶಿಲ್ಪ ಪರಂಪರೆ ಉಳಿಸಿ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜಿ ಹೇಳಿದರು.
ಕೆಂಪಮ್ಮ ಓಬಳಾಚಾರ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಕನಕಪುರ ರಸ್ತೆಯ ವಿಶಾಲಾಕ್ಷಿ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಖೀಲ ಭಾರತ ವಿಶ್ವಕರ್ಮ ಸಾಧು-ಸಂತರ ಪ್ರಥಮ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, “ಭಾರತದಲ್ಲಿ ಶಿಲ್ಪಪರಂಪರೆ ಅಭಿವೃದ್ಧಿಯಲ್ಲಿ ವಿಶ್ವಕರ್ಮರ ಸಾಧನೆ ಮರೆಯಲು ಸಾಧ್ಯವಿಲ್ಲ,’ ಎಂದು ತಿಳಿಸಿದರು.
ಸನಾತನ ಹಿಂದು ಸಂಸ್ಕೃತಿಯಲ್ಲಿ ದೇವತೆಗಳ ಕಲ್ಪನೆ ಕೊಟ್ಟವರು ವಿಶ್ವ ಕರ್ಮರು. ಶಿಲ್ಪಕಲೆ, ವಾಸ್ತುಶಿಲ್ಪವನ್ನು ದೇಶದೆಲ್ಲೆಡೆ ಪ್ರಚಾರ ಪಡಿಸಿದ ಅವರು, ಎಲ್ಲರಲ್ಲಿ ಒಂದಾಗಿ, ಸರ್ವಧರ್ಮದಲ್ಲಿ ಸಮನ್ವಯತೆ ತಂದುಕೊಟ್ಟಿದ್ದಾರೆ. ಅಂತಹ ಅದ್ಭುತ ಪರಂಪರೆಯನ್ನು ಪ್ರಸ್ತುತ ಸರ್ಕಾರಗಳು ನಿರ್ಲಕ್ಷ್ಯ ಮಾಡದೆ, ಶಿಲ್ಪಕಲೆಗಾಗಿ ಗುರುಕುಲ ಅಥವಾ ಕಾಲೇಜುಗಳನ್ನು ತೆರೆಯಬೇಕು. ಶಿಲ್ಪ ಸಂಸ್ಕೃತಿ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ದೇಶದ 12 ರಾಜ್ಯಗಳ 68ಕ್ಕೂ ಹೆಚ್ಚು ಮಠಾಧಿಪತಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದು, ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ಗಳು ನಡೆದು, ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಹೇಳಿದರು. ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಕ್ಕಬಳ್ಳಾಪುರ ಜ್ಞಾನ ನಂದ ಆಶ್ರಮ ನಂದಿ ಮಠದ ಶಿವಾತ್ಮಾನಂದ ಸರಸ್ವತೀ ಸ್ವಾಮೀಜಿ, “ಶಿಲ್ಪ ಬ್ರಾಹ್ಮಣ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕಿದೆ.
ಎಲ್ಲೋರದ ಏಕಶಿಲಾ ಕೈಲಾಸ ದೇವಾಲಯವನ್ನು ವಿಶ್ವಕರ್ಮ ಶಿಲ್ಪಿಗಳೇ ನಿರ್ಮಿಸಿದ್ದರು. ಅದರ ಅರಿವು ಇಲ್ಲದವರು, ಇದು ಎಲಿಯನ್‌ಗಳು ಕಟ್ಟಿದ್ದು ಎನ್ನುತ್ತಾರೆ. ಇಂತ ತಪ್ಪು ಗ್ರಹಿಕೆಗಳನ್ನು ತೊಡೆದು ಹಾಕಬೇಕಿದೆ ಎಂದರು. ಅಲಹಬಾದ್‌ನ ವಿಶ್ವಕರ್ಮ ಶಕ್ತಿಪೀಠದ ದಿಲಿಪ್‌ಜೀ ಮಹಾರಾಜ್ ಸರಸ್ವತಿ, ಅರೇಮಾದನಹಳ್ಳಿಯ ಶ್ರೀ ಸುಜ್ಞಾನ ಪ್ರಭು ಪೀಠದ ವಿಶ್ವಕರ್ಮ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನರ್ತೀ ಸ್ವಾಮೀಜಿ, ಶಹಾಪುರದ ಆನೆಗುಂದಿ ವಿಶ್ವಕರ್ಮ ಮಹಾ ಏಕದಂಡಗಿ ಸಂಸ್ಥಾನ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಇದ್ದರು.