ಹೊಸಪೇಟೆ: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಟ್ಟಡ ಕಾರ್ಮಿಕರಿಗೆ ನಿವೇಶನ, ಮನೆ, ಕಲ್ಯಾಣ ಮಂಡಳಿ ರಚನೆ, ಹಮಾಲಿ ಕಾರ್ಮಿಕರಿಗೆ, ನಿವೇಶನ, ಮನೆ ಹಾಗೂ ಕಲ್ಯಾಣ ಮಂಡಳಿ ರಚನೆ ಮಾಡುವುದು ಸೇರಿದಂತೆ ಇತರೆ ಬೇಡಿಕೆಯನ್ನು ಕೂಡಲೇ ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದ ಅವರು, ಒಂದೊಮ್ಮೆ ಬೇಡಿಕೆ ಈಡೇರಿಸಲು ಸರ್ಕಾರ ವಿಫಲವಾದರೆ, ಜ. 10ರಂದು ಹಂಪಿ ಉತ್ಸವಕ್ಕೆ ಆಗಮಿಸುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾರು ತಡೆದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ದೇಶ ಕುಸಿದಿರುವ ಆರ್ಥಿಕತೆಯ ಪರಿಣಾಮ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕ ವರ್ಗದ ಬದುಕಿನ ಮೇಲೆ ತ್ರೀವ ಪರಿಣಾಮ ಬೀರಿದೆ. ಅಪಾರ ಕಾರ್ಮಿಕರು ಕೆಲಸಗಳನ್ನು ಕಿತ್ತುಕೊಂಡಿದೆ.
ಆರ್ಥಿಕ ಹಿಂಜರಿತದ ನೆಪದಲ್ಲಿ ಕೇಂದ್ರ ಸರ್ಕಾರ ದೊಡ್ಡ ಶ್ರೀಮಂತರಿಗೆ 1.45 ಲಕ್ಷ ಕೋಟಿ ತೆರಿಗೆ ವಿನಾಯಿತಿ ನೀಡಿದೆ. ಆದರೆ, ಕಾರ್ಮಿಕರಿಗೆ ಉದ್ಯೋಗ ಭದ್ರತೆ ಹಾಗೂ ಕಲ್ಯಾಣ ಕಾರ್ಯಕ್ರಮಕ್ಕಾಗಿ ಒಂದೇ ಒಂದು ರೂಪಾಯಿ ನೀಡದೆ ಕಾರ್ಮಿಕ ವಲಯಕ್ಕೆ ದ್ರೋಹ ಬಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆ: ಕಾರ್ಮಿಕರಿಗೆ ಕನಿಷ್ಟ 21 ಸಾವಿರ ವೇತನ ನಿಗದಿ, ಪಿಂಚಣಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆ ಜಾರಿಮಾಡಬೇಕು. ಬೆಲೆ ಏರಿಕೆ ನಿಯಂತ್ರಣ ಮತ್ತು ಜೀವನಾವಶ್ಯಕ ವಸ್ತುಗಳನ್ನು ಸಾರ್ವಜನಿಕ ಪಡಿತರ ಮೂಲಕ ವಿತರಿಸುವ ವ್ಯವಸ್ಥೆ ಮಾಡಬೇಕು. ಅವಶ್ಯಕತೆಗಳಿಗೆ ಅನುಗುಣವಾಗಿ ಉದ್ಯೋಗಗಳನ್ನು ಸಂಘಟಿಸಬೇಕು. ಮಂಜೂರಾದ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ವಿವಿಧ ಸ್ಕೀಂಗಳಲ್ಲಿ ದುಡಿಯುತ್ತಿರುವ ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕರ ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ಬಲಪಡಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೃಷಿ ಕೂಲಿಕಾರರ ವೇತನ ಹೆಚ್ಚಿಸಬೇಕು.
ಐಎಲ್‌ಒಎಸ್ ಸಾರ್ವತ್ರೀಕರಣ, ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣ, ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಸಮರ್ಪಕ ಅನುದಾನ ನೀಡಬೇಕು. ಆಕ್ಷರ ದಾಸೋಹ ನೌಕರರನ್ನು ಹಾಗೂ ಗ್ರಾಪಂ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಎನ್. ಯಲ್ಲಾಲಿಂಗ, ಎಂ. ಗೋಪಾಲ್, ಕೆ. ರಾಮಾಂಜಿನಿ, ಮಹಮ್ಮದ್ , ಮಂಜುನಾಥ, ಹುಲಿಗೆಮ್ಮ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.