ಕುಣಿಗಲ್: ತಾಲೂಕಿನ ಹುಲಿಯೂರು ದುರ್ಗ ಹೋಬಳಿ ಉಜ್ಜಿನಿ ಮತ್ತು ನಿಡಸಾಲೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ ತನಿಖೆ ನಡೆಸುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದರು.
ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಶಿವಕುಮಾರ್ ಎಂಬ ವ್ಯಕ್ತಿ ಎಸ್. ಕೆ.ಟ್ರೇಡರ್ ಹೆಸರಿನಲ್ಲಿ ನಖಲಿ ಬಿಲ್ ಸೃಷ್ಟಿಸಿ, ಟಿನ್ ನಂಬರ್ ತೆಗೆದುಕೊಂಡು ಗ್ರಾಪಂ ಮತ್ತು ತಾಪಂ ವ್ಯಾಪ್ತಿಯಲ್ಲಿ ಸಿ.ಸಿ.ರಸ್ತೆ, ಚರಂಡಿ ಹಾಗೂ ಚೆಕ್ ಡ್ಯಾಂ ಕಾಮಗಾರಿಗಳಿಗೆ ಶೇ.15 ಕಮಿಷನ್ ಪಡೆದು ನಕಲಿ ಬಿಲ್ ಕೊಡುತ್ತಿದ್ದಾರೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಗ್ರಾಮದ ಮುಖಂಡ ಎಸ್. ರಾಮಲಿಂಗಯ್ಯ ಆಗ್ರಹಿಸಿದರು. ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಮಾಡಿ ಶೇ.15ರಷ್ಟು ಕಮಿಷನ್ ಆಸೆಗೆ ಕಲಿ ಟ್ರೇಡರ್‌ಗಳ ಹೆಸರಿನಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನ ಎಸ್ಸಿ, ಎಸ್ಟಿ ಸ್ಕೀಂನಲ್ಲಿ ಇಲಿಗರ ಪಾಳ್ಯ ಹಾಗೂ ರಾಜಪ್ಪನದೊಡ್ಡಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣದಲ್ಲಿ ಬಿಲ್ ಆಗಿದೆ. ಆದರೆ ಇದೇ ಕಾಮಗಾರಿಗೆ 2018-19ರಲ್ಲಿ ನಿಡಸಾಲೆ ಪಂಚಾಯಿತಿಯಿಂದ ಎನ್‌ಆರ್‌ಐಜಿ ಯೋಜನೆಯಡಿ 60.40 ಅನುಪಾತದಲ್ಲಿ ಕಾಮಗಾರಿ ಮಾಡಬೇಕು. ಆದರೆ 90.10 ಅನುಪಾತದಲ್ಲಿ ಕಾಮಗಾರಿ ಮಾಡಿ ಬಿಲ್ ಡ್ರಾ ಮಾಡಲಾಗಿದೆ ಎಂದು ದೂರಿದರು. ಎಂ.ಜಿ.ಎನ್.ಆರ್ .ಇ.ಜಿ.ಎ ಯೋಜ ನಡಿಯಲ್ಲಿ ಶೆಡ್ ನಿರ್ಮಾಣಕ್ಕೆ ಅನು ಮೋದನೆ ನೀಡು ವಂತಿಲ್ಲ. ಆದರೆ ಇದನ್ನು ಉಲ್ಲಂಘಿಸಿದ ಅಧಿಕಾರಿಗಳು ಗುಣಮಟ್ಟದ ಶೆಡ್ ನಿರ್ಮಿಸದೆ ಬೇಕಾ ಬಿಟ್ಟಿ ಬಿಲ್ ಮಾಡಿದ್ದಾರೆ. ಈ ಸಂಬಂಧ ನಿಡಸಾಲೆ ಗ್ರಾಪಂ ಪ್ರಭಾರ ಪಿಡಿಒ ಅವರನ್ನು ಅಮಾನತಿ ನಲ್ಲಿಟ್ಟು ಸಮಗ್ರ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ನಕಲಿ ಬಿಲ್ ಸೃಷ್ಟಿಸಲು ಅಂಗಡಿ ಸ್ಥಾಪಿಸಲಾಗಿದೆ. ಈ ಅಂಗಡಿಯಲ್ಲಿ ಸಾರ್ವಜನಿಕರು ಯಾರು ವ್ಯವಹಾರ ಮಾಡುತ್ತಿಲ್ಲ. ಎಸ್.ಕೆ. ಟ್ರೇಡರ್ಸ್ ಬ್ಯಾಂಕ್ ಖಾತೆಗೆ ಕೋಟಿಗೂ ಅಧಿಕ ಹಣ ಜಮೆಯಾಗಿದೆ. ಇದಕ್ಕೆ ಜಿಎಸ್‌ಟಿ ಪಾವತಿ ಮಾಡಿಲ್ಲ ಎಂದು ಆರೋಪಿಸಿದರು.
ಅಪಹರಣ, ಕೊಲೆ ಬೆದರಿಕೆ: ಪ್ರತಿಭಟನೆ ವಿಚಾರ ತಿಳಿದು ಗ್ರಾಪಂ ಪಿಡಿಒ ನಾಗರಾಜು ಹಾಗೂ ಎಸ್.ಕೆ. ಟ್ರೇಡರ್ ಮಾಲೀಕ ಶಿವಕುಮಾರ್ ಹಣದ ಆಮಿಷ ಒಡ್ಡಿದರು. ಒಪ್ಪದಿದ್ದಾಗ ಕೊಲೆ ಬೆದರಿಕೆ ಹಾಕಿದ್ದಾರೆ. ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು ಎಂದು ರಾಮ ಲಿಂಗಯ್ಯ ಆಗ್ರಹಿಸಿದರು.
ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿಸ್ಥ ಪಿಡಿಒ ಅವರನ್ನು ಸೇವೆಯಿಂದ ಅಮಾನತು ಪಡಿಸುವುದರ ಜತೆಗೆ ನಕಲಿ ಬಿಲ್ ಸೃಷ್ಟಿಸಿ ಭ್ರಷ್ಟಾಚಾರ ಎಸಗಲು ಕಾರಣರಾದ ಎಸ್.ಕೆ. ಟ್ರೇಡರ್ ಮಾಲೀಕ ಶಿವಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು. ಸತ್ಯಾಗ್ರಹದಲ್ಲಿ ಯು.ಎ.ಜಗದೀಶ್, ಕೃಷ್ಣಪ್ಪ, ಕರಿಗೌಡ ಮತ್ತಿತರರಿದ್ದರು.