ಬೆಂಗಳೂರು: ರಂಗಕರ್ಮಿ ದಿ. ಏಣಗಿ ಬಾಳಪ್ಪ ಅವರಿಗೆ ಮರಣೋತ್ತರ “ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಗುರುವಾರ ಆಯೋಜಿಸಿದ್ದ “ಅಳಿದು ಉಳಿದ ಬಾಳಪ್ಪ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಳಪ್ಪ ಅವರ 420ಕ್ಕೂ ಹೆಚ್ಚು ನಾಟಕ, 120 ಸಿನಿಮಾಗಳನ್ನು ಗಮನಿಸಿದಾಗ ಅವರ ಪ್ರಾದೇಶಿಕ ಪ್ರಜ್ಞೆ ಹೇಗಿತ್ತು ಎಂಬುದು ತಿಳಿಯುತ್ತದೆ ಎಂದರು.
ಕಲೆಯ ವೈದ್ಯರಂತಿದ್ದ ಬಾಳಪ್ಪ ಅವರು, ಪ್ರೇಕ್ಷಕರ ನಾಡಿ ಮಿಡಿತ ಅರಿತಿದ್ದರು. ಅದಕ್ಕೆ ತಕ್ಕಂತೆ ಅವರು ತಮ್ಮ ನಾಟಕಗಳನ್ನು ರೂಪಿಸುತ್ತಿದ್ದರು. ಹಾಗಾಗಿ ಬಾಳಪ್ಪ ಅವರನ್ನು ರಂಗಭೂಮಿಯ ರಾಜಕುಮಾರ ಎಂದರೆ ತಪ್ಪಾಗಲಾರದು. ಇಂಥ ಅಪೂರ್ವ ಕಲಾವಿದರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಗೌರವವೂ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ಬಾಳಪ್ಪ ಅವರ ಪುತ್ರ ಡಾ.ಬಸವರಾಜ ಏಣಗಿ ಮಾತನಾಡಿ, ನಾಟಕದ ಉದ್ದೇಶ ಮನರಂಜನೆಯ ಬದಲಾಗಿ ಸಂದೇಶ ನೀಡುವುದು ಎಂದು ಚಿಕ್ಕೋಡಿ ಶಿವಲಿಂಗಸ್ವಾಮೀಜಿ ಹೇಳುತ್ತಿದ್ದ ಮಾತನನ್ನು ತಂದೆ ಪಾಲಿಸಿಕೊಂಡು ಬಂದಿದ್ದರು. ಜತೆಗೆ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೇ ಕೊಡಬೇಕು ಎಂಬ ಮಾತನ್ನು ಅವರು ಮೈಗೂಡಿಸಿಕೊಂಡಿದ್ದರು ಎಂದರು.
ಕಾರ್ಯಕ್ರಮದಲ್ಲಿ ಧಾರವಾಡ ರಂಗಾಯಣ ನಿರ್ದೇಶಕ ಪ್ರಕಾಶ ಗರೂಡ, ಹಿರಿಯ ರಂಗಕರ್ಮಿ ಡಾ.ವಿಜಯಾ, ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಸೇರಿ ಪ್ರಮುಖರು ಹಾಜರಿದ್ದರು.