ಕುದೂರು: ಗ್ರಾಮದಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಿ, ಜನರು ನೆಮ್ಮದಿಯಿಂದ ಜೀವನ ಮಾಡಲಿಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯರು ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.
ಬೀದಿ ಬೀದಿಗಳಲ್ಲೂ ನಾಯಿಗಳು ಹಿಂಡು ಹಿಂಡಾಗಿ ತಿರುಗಾಡುತ್ತಿವೆ. ರಸ್ತೆಗಳಲ್ಲಿ ಒಂಟಿಯಾಗಿ ಸಂಚಾರ ಮಾಡಲು ಜನರು ಭಯಭೀತರಾಗುತ್ತಿದ್ದಾರೆ. ರಸ್ತೆಗಳಲ್ಲಿ ಅಲ್ಲಲ್ಲಿ ಮಲಗಿರುತ್ತವೆ. ಗುಂಪು ಗುಂಪಾಗಿ ಮಲಗಿರುವ ನಾಯಿಗಳು ಮಕ್ಕಳು ಓಡಾಡುವಾಗ ಏಕಾಏಕಿ ದಾಳಿ ಮಾಡುತ್ತವೆ. ನಾಯಿಗಳಿಂದ ಗಾಯಗೊಂಡ ಮಕ್ಕಳು ಆಸ್ಪತ್ರೆಗಳಿಗೆ ದಾಖಲಾಗಿವೆ.
ಮನವಿ ಮಾಡಿದರೂ ಪ್ರಯೋಜನವಿಲ್ಲ: ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿಕೊಂಡರು ಕೂಡ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ದ್ವಿಚಕ್ರ ವಾಹನ ಸವರಾರು ಗಲ್ಲಿಗಳಲ್ಲಿ ಸಂಚಾರ ಮಾಡುವಾಗ ಹಿಂದೆ ಬೀಳುವ ನಾಯಿಗಳು, ಅಟ್ಟಾಡಿಸಿಕೊಂಡು ಬಂದು ಕಚ್ಚುತ್ತವೆ. ಬೆಳಗಿನ ಜಾವ ಕೆಲಸಕ್ಕೆ ಹೋಗುವ ಹುಡುಗರನ್ನು ಅಟ್ಟಾಡಿಸುತ್ತಿವೆ. ಇದರಿಂದ ಕೆಲಸ ಕಾರ್ಯ ಮಾಡಲು ಕಷ್ಟವಾಗುತ್ತಿದೆ. ಈ ಸಮಸ್ಯೆಯಿಂದ ಜನರನ್ನು ಮುಕ್ತಗೊಳಿಸಲು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಾಯಿಗಳಿಂದ ನೆಮ್ಮದಿ ಇಲ್ಲ: ಗ್ರಾಮಸ್ಥರಾದ ಮಹೇಶ್ ಮಾತನಾಡಿ, ಬೈಪಾಸ್ ರಸ್ತೆಯಲ್ಲಿ ಕೋಳಿ ತ್ಯಾಜ್ಯವನ್ನು ಸುರಿಯುವುದರಿಂದ ಅದನ್ನು ತಿನ್ನಲು ಬರುವ ಬೀದಿ ನಾಯಿಗಳು, ಕೆಲ ಗಲ್ಲಿಗಳನ್ನು ಬಿಟ್ಟು ಹೋಗುತ್ತಿಲ್ಲ. ರಾತ್ರಿಯಲ್ಲಾ ಜೋರಾಗಿ ಶಬ್ದ ಮಾಡುವುದರಿಂದ ನೆಮ್ಮದಿಯಿಂದ ನಿದ್ದೆ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಮಕ್ಕಳು ಪೋಷಕರ ಜೋತೆ ತಿರುಗಾಡಲು ಹೆದರುತ್ತಿದ್ದಾರೆ. ಶಾಲೆ ರಜೆ ಇದ್ದರೂ ಆಟವಾಡಲು ಮನೆಯಿಂದ ಹೊರ ಬರದೆ ಭಯ ಭೀತಿಗೊಂಡಿದ್ದಾರೆ.
ನಾಯಿಗಳ ಹಾವಳಿ ತಡೆಗೆ ಗ್ರಾಪಂ ವಿಫಲ: ಗ್ರಾಮದ ವಿವಿಧ ಬಡಾವಣೆಗಳಲ್ಲಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ಗ್ರಾಮ ಪಂಚಾಯ್ತಿ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ ಎಂದು ಗ್ರಾಮ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ನಾಯಿಗಳ ಸಂತಾನೋತ್ಪತ್ತಿಗೆ ಸಕಾಲವಾಗಿದೆ. ಇದರಿಂದ ನಾಯಿಗಳ ಮತ್ತಷ್ಟು ನಾಯಿಗಳ ಸಂಖ್ಯೆ ಹೆಚ್ಚಾಗುವ ಅತಂಕವಿದೆ. ಇನ್ನಾದರೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎಚ್ಚೆತ್ತುಕೊಂಡು ನಾಯಿಗಳ ಸಂತಾನ ಹರಣ ಚಿಕಿತ್ಸೆ ಮಾಡಿಸಬೇಕಾಗಿದೆ.