Advertisement

ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಒತ್ತಾಯ

04:25 PM May 17, 2019 | Team Udayavani |

ತಿಪಟೂರು: ನಗರದ ಹಳೆ ಖಾಸಗಿ ಬಸ್‌ ನಿಲ್ದಾಣದ ಪಕ್ಕದಲ್ಲಿನ ಆಟೋ ನಿಲ್ದಾಣದಲ್ಲಿ ಮಳೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆ ಅಥವಾ ತಾಲೂಕು ಆಡಳಿತ ಕೂಡಲೇ ಈ ಸಮಸ್ಯೆ ಪರಿಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಪ್ರಯಾಣಿಕರು ಹಾಗೂ ಆಟೋ ಚಾಲಕರು ಒತ್ತಾಯಿಸಿದ್ದಾರೆ.

Advertisement

ನಗರದ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಹಾಗೂ 206 ಹೆದ್ದಾರಿ ರಸ್ತೆ ಪಕ್ಕದಲ್ಲಿರುವ ಆಟೋ ನಿಲ್ದಾಣದಲ್ಲಿ ಸೋನೆ ಮಳೆ ಬಂದರೂ ಸಾಕು, ಕೆಸರು ಗದ್ದೆಯಾಗುತ್ತದೆ. ಗ್ರಾಮೀಣ ಭಾಗಕ್ಕೆ ಸಂಚರಿಸುವ ನೂರಾರು ಆಟೋಗಳು ಕೆಸರಲ್ಲೇ ನಿಂತುಕೊಳ್ಳುವಂತಾಗಿದೆ. ಅಲ್ಲದೆ, ನಿಲ್ದಾಣದ ಸುತ್ತಮುತ್ತ‌ಲಿನ ಅಂಗಡಿಗಳ ಕಸ, ತ್ಯಾಜ್ಯ ವಸ್ತುಗಳನ್ನು ಇಲ್ಲೇ ಬಿಸಾಡುವುದರಿಂದ ದುರ್ವಾಸನೆ ಹೆಚ್ಚಾಗಿದೆ. ಹಸುಗಳು, ಹಂದಿ, ನಾಯಿಗಳು ತ್ಯಾಜ್ಯ ವಸ್ತುಗಳಿಗೆ ಮುತ್ತಿಕೊಳ್ಳುವುದಲ್ಲದೇ ಕೆಸರಲ್ಲಿಯೇ ಬಿದ್ದು ಒದ್ದಾಡುತ್ತವೆ. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಕ್ಕೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ.

ಈ ಕೆಸರು ಗದ್ದೆಯ ಪಕ್ಕದಲ್ಲಿಯೇ ಇಂದಿರಾ ಕ್ಯಾಂಟೀನ್‌ ಇದ್ದು, ವಿಧಿ ಇಲ್ಲದೆ ದುರ್ವಾಸನೆಯಲ್ಲಿಯೇ ಊಟ-ತಿಂಡಿ ಸೇವಿಸಬೇಕಾಗಿದೆ. ಆಟೋ ನಿಲ್ದಾಣದಿಂದ ಹೊನ್ನೇನಹಳ್ಳಿ, ಬೆಣ್ಣೇನಹಳ್ಳಿ, ಗುರುಗದಹಳ್ಳಿ, ಶಿವರ, ಮಡೇನೂರು, ಬಿದಿರೇಗುಡಿ ಭಾಗಕ್ಕೆ ಹೋಗುವ ನೂರಾರು ಜನ ಪ್ರಯಾಣಿಕರು ಇಲ್ಲಿನ ಆಟೋ ನಿಲ್ದಾಣದಲ್ಲಿಯೇ ಕಾಯಬೇಕು. ಪಕ್ಕದಲ್ಲಿಯೇ ಇರುವ ಸಾರ್ವಜನಿಕ ಶೌಚಾಲಯದಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಅಲ್ಲಿಯೂ ದುರ್ವಾಸನೆ ಬೀರುತ್ತಿದೆ. ನಿಲ್ದಾಣದಲ್ಲಿ ಕಸದ ಬುಟ್ಟಿಗಳಿಲ್ಲದೆ ವಾರಗಟ್ಟಲೆ ಕಸದ ರಾಶಿ ಬಿದ್ದಲ್ಲಿಯೇ ಕೊಳೆಯುತ್ತಿದೆ. ಮಳೆಯ ನೀರು ಕಸದ ಜೊತೆ ಸೇರಿ ಮತ್ತಷ್ಟು ನಿಲ್ದಾಣ ಕೊಳಚೆ ಪ್ರದೇಶದಂತಾಗಿ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದ್ದು ಪ್ರಯಾಣಿಕರಂತೂ ನರಕಯಾತನೆ ಅನುಭವಿಸುವಂತಾಗಿದ್ದರೂ ಕೂಗಳತೆಯ ದೂರದಲ್ಲಿರುವ ನಗರಸಭೆ ಅಧಿಕಾರಿಗಳು ಕಂಡರೂ ಕಾಣದಂತಿರುವುದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next