ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ದಲಿತರು, ಅಲ್ಪಸಂಖ್ಯಾತರರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟ ಸಾಹು ಮಹಾರಾಜ್ ಹಾಗೂ ಶಿವಾಜಿ ವಂಶಸ್ಥರಾದ ಮರಾಠಿಗರನ್ನು “ಪ್ರವರ್ಗ 2ಎ’ಗೆ ಸೇರಿಸಲೇಬೇಕು ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಸರ್ಕಾರವನ್ನು ಒತ್ತಾಯಿಸಿದರು. ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ವತಿಯಿಂದ ವಸಂತ ನಗರದ ಕೆಕೆಎಂಪಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ “ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತ್ಯುತ್ಸವ’ದಲ್ಲಿ ಮಾತನಾಡಿದರು.
ಮರಾಠ ವಂಸ್ಥರಾದ ಕೊಲ್ಹಾಪುರದ ಸಾಹು ಮಹಾರಾಜರು ಈ ದೇಶದಲ್ಲಿ ಮೊದಲ ಬಾರಿಗೆ ದಲಿತರು, ಅಲ್ಪಸಂಖ್ಯಾತರರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟರು. ಅದೇ ವಂಶದ ಶಿವಾಜಿ ಮಹಾರಾಜರು ದೇಶಕ್ಕಾಗಿ ಸಾಕಷ್ಟು ಯುದ್ಧ ಮಾಡಿ ರಕ್ತ ಹರಿಸಿದ್ದಾರೆ. ಅಂತಹ ಮಹನೀಯರ ವಂಶದಲ್ಲಿ ಹುಟ್ಟಿರುವ ಮರಾಠಿಗರನ್ನು “ಪ್ರವರ್ಗ 2ಎ”ಗೆ ಸೇರಿಸುವ ಮೂಲಕ ಸಮಾನತೆ ನೀಡಬೇಕು. ಮರಾಠರ ಬಹುದಿನಗಳ ಈ ಬೇಡಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಡೇರಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.
ದೇಶಭಕ್ತಿಗಾಗಿ ಪ್ರಾಣ ತ್ಯಾಗ ಮಾಡಿದವರು ಮರಾಠಿಗರನ್ನು ಜಾತಿ ದೃಷ್ಟಿಯಿಂದ ನೋಡಬಾರದು. ಶಿವಾಜಿಯವರು ಎಲ್ಲರನ್ನು ಸಮಾನ ದೃಷ್ಟಿಯಲ್ಲಿ ಕಾಣುತ್ತಿದ್ದರು. ಶಿವಾಜಿಯ ಸೈನ್ಯದಲ್ಲಿ 36 ಸಾವಿರ ಮುಸ್ಲಿಂ ಸೈನಿಕರಿದ್ದರು. ಈ ಮೂಲಕ ಅವರು ಮಾಡಿದ ಯುದ್ಧಗಳಲ್ಲಿ ಮುಸಲ್ಮಾನರು ಪ್ರಮುಖ ಪಾತ್ರವಹಿಸುತ್ತಿದ್ದರು. ಇನ್ನು ಮರಾಠಿಗರೆಲ್ಲ ಮಹಾರಾಷ್ಟ್ರದಲ್ಲೇ ಇರಬೇಕು ಎಂಬ ನಿಯಮವಿಲ್ಲ. ಬೆಳಗಾವಿಯ ಮರಾಠಿಗರು ಕನ್ನಡಿಗರೇ ಆಗಿದ್ದು, ಇದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಮರಾಠ ಪರಿಷತ್ತಿನ ಗೌರವ ಅಧ್ಯಕ್ಷ ವಿ.ಎ.ರಾಣೋಜಿರಾವ್ ಸಾಠೆ ಮಾತನಾಡಿ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದಳಿದ ಮರಾಠ ಸಮುದಾಯದ ಏಳಿಗೆಗೆ ರಾಜ್ಯ ಸರ್ಕಾರವು 100 ಕೋಟಿ ರೂ. ಅನುದಾನ, ಪ್ರತ್ಯೇಕ ನಿಗಮ ಮಂಡಳಿ ನೀಡಬೇಕು ಎಂದು ಮನವಿ ಮಾಡಿದರು. ಕೆಕೆಎಂಪಿ ಅಧ್ಯಕ್ಷ ಎಸ್.ಸುರೇಶ್ ರಾವ್ ಸಾಠೆ, ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ವಿ.ಮಾನೆ, ಪಾಲಿಕೆ ಸದಸ್ಯರಾದ ಎಸ್.ಸಂಪತ್ ಕುಮಾರ್, ಆರ್.ಗಣೇಶ್ ರಾವ್ ಮಾನೆ ಸೇರಿದಂತೆ ಗಣ್ಯರಿದ್ದರು.
ಶಿವಾಜಿ ಜಯಂತಿ ತಪ್ಪೇನು?: ಇತಿಹಾಸದ ತಿಳಿವಳಿಕೆ ಇಲ್ಲದರು ಶಿವಾಜಿ ಜಯಂತಿಗೆ ವಿರೋಧಿಸುತ್ತಾರೆ. ಅದಕ್ಕೆ ಅವರು ನೀಡುವ ಕಾರಣ ಶಿವಾಜಿ ತಂದೆ ಶಹಾಜಿ ಅವರು ಬಿಜಾಪುರ ಸುಲ್ತಾನರ ಬಳಿ ಇದ್ದಾಗ ಬೆಂಗೂರಿನ ಕೆಂಪೇಗೌಡರ ವಿರುದ್ಧ ಯುದ್ಧ ಮಾಡಿ ಸೋಲಿಸುತ್ತಾರೆ ಎಂಬುದು. ಆದರೆ, ಶಹಾಜಿ ಅವರು ಕೆಂಪೇಗೌಡರು ಸೋತಾಗ ಜೈಲಿಗೆ ಹಾಕದೆ ಬಿಡುತ್ತಾರೆ. ಅದೇ ವಿಜಯನಗರದ ಕೃಷ್ಣದೇವರಾಯ ಕೆಂಪೇಗೌಡರನ್ನು ಸೋಲಿಸಿ, ಆರು ವರ್ಷಗಳ ಕಾಲ ಜೈಲಿಗೆ ಹಾಕುತ್ತಾರೆ. ಇಂತಹ ಕೃಷ್ಣದೇವರಾನಯನ ಜಯಂತಿ ಮಾಡಬಹುದು. ಮೊಘಲರು ದೇಶವನ್ನು ಕೊಳ್ಳೆ ಹೊಡೆಯುವಾಗ ಅವರ ವಿರುದ್ಧ ದಿಟ್ಟತನದಿಂದ ಹೋರಾಡಿದ ಶಿವಾಜಿಯ ಜಯಂತಿ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದರು.
ಜನಪ್ರತಿನಿಧಿಗಳು ಗೈರು – ಸಿಂಧ್ಯಾ ಬೇಸರ: ಬೆಂಗಳೂರಿನಲ್ಲಿ ಮರಾಠಿಗರ ಕಾರ್ಯಕ್ರಮ ಎಂದರೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷಿéಸುತ್ತಾರೆ. ಅದೇ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮೊದಲಾದ ಕಡೆ ಶಿವಾಜಿ ಜಯಂತಿ ಮಾಡಿದ್ದರೆ ಮುಗಿಬಿದ್ದು ಹೆಸರು ಹಾಕಿಸಿಕೊಂಡು ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರು ಎಂದು ಪಿಜಿಆರ್ ಸಿಂಧ್ಯಾ ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮರಾಠರ ರಾಜಕೀಯ ಶಕ್ತಿ ಕಡಿಮೆಯಾಗಿದೆ ಎಂದರು.