ಲಕ್ಷ್ಮೇಶ್ವರ: ಪುರಸಭೆಯಲ್ಲಿ ಮಂಗಳವಾರ ಅಧ್ಯಕ್ಷೆ ಪೂರ್ಣಿಮಾ ಪಾಟೀಲ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಸದಸ್ಯ ಮಹೇಶ ಹೊಗೆಸೊಪ್ಪಿನ ಆಶ್ರಯ ಪ್ಲಾಟ್ ನಿವೇಶನಕ್ಕೆ ಸಂಬಂಧಿ ಸಿದಂತೆ ಉಂಟಾಗಿರುವ ಸಮಸ್ಯೆ ಕುರಿತು ಮಾತನಾಡಿ, ಆಶ್ರಯ ರಹಿತ ಅರ್ಹ ಫಲಾನುಭವಿಗಳಿಗೆ ವಿತರಿಸಲು ಖರೀದಿಸಿರುವ ಶಿಗ್ಲಿ ರಸ್ತೆಯಲ್ಲಿನ 32 ಎಕರೆ ಜಮೀನಿಗೆ ರಸ್ತೆ ಮಾರ್ಗವಿಲ್ಲ.
ಈ ಕಾರಣದಿಂದ 2018ರಲ್ಲೇ ಭೂಮಿ ಖರೀದಿಯಾಗಿದ್ದರೂ ದಾಖಲೆಗಳ ಕೊರತೆ ಕಾರಣದಿಂದ ಇದುವರೆಗೂ ಫಲಾನುಭವಿಗಳಿಗೆ ನಿವೇಶನ ನೀಡಲಾಗುತ್ತಿಲ್ಲ. ಜಮೀನು ಖರೀದಿಸುವ ವೇಳೆ ಅಧಿಕಾರಿಗಳು ಮಾಡಿದ ತಪ್ಪಿನಿಂದ ಜನರು ಕೇಳುವ ಪ್ರಶ್ನೆಗೆ ಪುರಸಭೆ ಸದಸ್ಯರು ಉತ್ತರಿಸದಂತಾಗಿದೆ. ಆದ್ದರಿಂದ ಈ ವಿಷಯದಲ್ಲಿ ಜಾಣ ಕುರುಡುತನ ಪ್ರದರ್ಶಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಬೇಕು.
ಜಮೀನು ನೀಡಿದ ಮಾಲೀಕರು ರಸ್ತೆ ಮಾರ್ಗ ತೋರಿಸಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ಆದಷ್ಟು ಬೇಗ ಫಲಾನುಭವಿಗಳಿಗೆ ನಿವೇಶನ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದರು. ಈ ಕುರಿತು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ, ವಾಗ್ವಾದ, ಆರೋಪ-ಪ್ರತ್ಯಾರೋಪ ನಡೆಯಿತು. ಬಳಿಕ ಹಿರಿಯ ಸದಸ್ಯ ರಾಜೀವ್ ಕುಂಬಿ ಮತ್ತು ಉಪಾಧ್ಯಕ್ಷ ರಾಮಪ್ಪ ಗಡದವರ ಅವರು ಈ ಕುರಿತು ಶಾಸಕರು, ಪಟ್ಟಣದ ಹಿರಿಯರು ಮತ್ತು ಸದಸ್ಯರೊಡಗೂಡಿ ಕೂಲಂಕುಷವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳೋಣ ಎಂದು ಸೂಚಿಸಿದ ನಿಲುವಿಗೆ ಎಲ್ಲರೂ ಸಹಮತ ಸೂಚಿಸಿದರು.
ಶಿಗ್ಲಿ ನಾಕಾದಲ್ಲಿ ನಿರ್ಮಾಣಗೊಂಡ ಪುರಸಭೆ 9 ಮಳಿಗೆ ಸಂಕೀರ್ಣದ ಕಾಮಗಾರಿ ಪರಿಶೀಲಿಸಿ ಪುರಸಭೆ ಅಧಿಧೀನಕ್ಕೆ ಪಡೆದ ಬಳಿಕ ಟೆಂಡರ್ ಕರೆದು ಹರಾಜು ಮಾಡುವಂತೆ, ಪುರಸಭೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಹಾಕುವ ಬ್ಯಾನರ್, ಪೋಸ್ಟರ್‌ಗಳಿಗೆ ಕಡಿವಾಣ ಹಾಕಬೇಕು ಮತ್ತು ದರ ವಿಧಿಸಬೇಕು. ಅರ್ಧಕ್ಕೆ ನಿಂತಿರುವ ಮುಖ್ಯ ಬಜಾರ್ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳಿಸುವುದು, ಒಳಚರಂಡಿಗಳ ದುರಸ್ತಿಗೊಳಿಸುವುದು ಸೇರಿ ಅನೇಕ ವಿಷಯಗಳ ಕುರಿತು ಚರ್ಚೆ ನಡೆಯಿತು.
ಸಭೆ ಆರಂಭಕ್ಕೂ ಮುನ್ನ ನಟ ಪುನೀತ್ ರಾಜಕುಮಾರ್ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಸ್ತಾಕ್ ಶಿರಹಟ್ಟಿ, ಸದಸ್ಯರಾದ ಜಯಕ್ಕ ಕಳ್ಳಿ, ಬಸವರಾಜ ಓದುನವರ, ಪ್ರವೀ ಣ ಬಾಳಿಕಾಯಿ, ವಿಜಯ ಕರಡಿ, ಮಹದೇವಪ್ಪ ಅಣ್ಣಿಗೇರಿ, ಎಸ್. ಕೆ. ಹವಾಲ್ದಾರ್, ಅಶ್ವಿನಿ ಅಂಕಲಕೋಟಿ, ನೀಲಮ್ಮ ಮೆಣಸಿನಕಾಯಿ, ಪೂಜಾ ಖರಾಟೆ, ಯಲ್ಲಮ್ಮ ದುರಗಣ್ಣವರ, ವಾಣಿ ಹತ್ತಿ, ಸಿಕಂದರ ಕಣಿಕೆ, ಮಹೇಶ ಹುಲಬಜಾರ್, ಮಂಜುಳಾ ಗುಂಜಳ, ಮಂಜವ್ವ ನಂದೆಣ್ಣವರ, ನಾಮನಿರ್ದೇಶಿತ ಸದಸ್ಯರಾದ ವಿಜಯ ಕುಂಬಾರ, ಅರುಣ ಪಾಟೀಲ, ಚಂದ್ರು ಹಂಪಣ್ಣವರ, ಪ್ರವೀಣ ಬೋಮಲೆ ಇದ್ದರು.