ಬಾಗಲಕೋಟೆ: ಜಿಲ್ಲೆಯ ಮೂರು ನದಿಗಳ ಪ್ರವಾಹದಿಂದ ಜನರು ತೀವ್ರ ಸಂಕಷ್ಟದಲ್ಲಿದ್ದು, ಪ್ರತಿ ಎಕರೆ ಬೆಳೆ ಹಾನಿಗೆ 1.50 ಲಕ್ಷ ಹಾಗೂ ಜೀವ ಹಾನಿಯಾದ ಕುಟುಂಬದವರಿಗೆ 15 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ ಸೆ.11ರಂದು ಮಧ್ಯಾಹ್ನ 12ಕ್ಕೆ ಡಿಸಿ ಕಚೇರಿ ಎದುರು ಜಿಲ್ಲೆಯ ರೈತರು ಹಾಗೂ ಸಂತ್ರಸ್ತರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಗಂಗಾಧರ ಮೇಟಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿ ಪ್ರವಾಹದಿಂದ ಲಕ್ಷಾಂತರ ಎಕರೆ ಬೆಳೆ, ಮನೆ ಹಾನಿಯಾಗಿವೆ. ಕೆಲವರು ರೈತರ ಹತ್ತಾರು ಎಕರೆ ಬೆಳೆ ಹಾನಿಯಾದರೂ, ಕೇವಲ 2 ಹೆಕ್ಟೇರ್ ಬೆಳೆ ಹಾನಿಗೆ ಮಾತ್ರ ಪರಿಹಾರ ನೀಡುತ್ತಿದ್ದಾರೆ. ಇದರಿಂದ ರೈತರಿಗೆ ತೀವ್ರ ಅನ್ಯಾಯವಾಗಲಿದೆ. ಕೂಡಲೇ ರೈತರ ಎಷ್ಟು ಎಕರೆ ಬೆಳೆ ಹಾನಿಯಾಗಿದೆಯೋ ಅಷ್ಟೂ ಯೋಗ್ಯ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
11ರಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ, ಜಯ ಕರ್ನಾಟಕ ಸಂಘಟನೆ, ನೇಕಾರರ ಸಂಘ ಮತ್ತು ಕಾರ್ಮಿಕರ ಸಂಘ ಜಂಟಿಯಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸಿ, ಮನವಿ ಕೊಡುತ್ತೇವೆ. ಈ ಹೋರಾಟದಲ್ಲಿ 10 ಜಿಲ್ಲೆಗಳ ರೈತರು ಭಾಗವಹಿಸಲಿದ್ದಾರೆ ಎಂದರು.
ಕಬ್ಬು ಬೆಳೆಗೆ ಪ್ರತಿ ಎಕರೆಗೆ 1,50,000, ಇತರೆ ಬೆಳೆಗೆ ಎಕರೆಗೆ 1 ಲಕ್ಷ, ಹಸು, ಎಮ್ಮೆ, ಎತ್ತು ಪ್ರಾಣ ಹಾನಿಗೆ 80 ಸಾವಿರ ರೂ., ಆಡು, ಕುರಿಗಳಿಗೆ 25 ಸಾವಿರ ರೂ., ಸಂಪೂರ್ಣ ಹಾನಿಯಾದ ಮನೆಗೆ 15 ಲಕ್ಷ ರೂ., ಶೇ. 50 ಹಾನಿಯಾದ ಮನೆಗಳಿಗೆ 10 ಲಕ್ಷ ರೂ., ತೋಟಗಾರಿಕೆೆ ಬೆಳೆಗಳಿಗೆ 2 ಲಕ್ಷ ರೂ., ಜೀವ ಹಾನಿಯಾದ ಕುಟುಂಬಸ್ಥರಿಗೆ 15 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಹಕ್ಕೋತ್ತಾಯ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪ್ರವಾಹದಿಂದ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದು, ಬೆಳೆ ಸಾಲ, ಅಭಿವೃದ್ಧಿ ಸಾಲ, ಹೈನುಗಾರಿಕೆ ಸಾಲ, ಟ್ರ್ಯಾಕ್ಟರ್ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಪ್ರವಾಹಕ್ಕೆ ತುತ್ತಾದ ಗ್ರಾಮಗಳನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು. ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ಕಬ್ಬಿನ ಬಿಲ್ ನೀಡಬೇಕು ಎಂದರು. ಕಲ್ಲೋಳ್ಳಿ ಏತ ನೀರಾವರಿ ಯೋಜನೆಗೆ ಜಾಕ್‌ವೆಲ್ ಹಾಗೂ ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಇದುವರೆಗೆ ಪರಿಹಾರ ನೀಡಿಲ್ಲ. ಕೂಡಲೇ ಪರಿಹಾರ ನೀಡಬೇಕು. ಹೀಗೆ ಹಲವು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ರೈತ ಸಂಘ ಮುಖಂಡರಾದ ಶಶಿಕಾಂತ ಬಾಳಿಕಾಯಿ, ಅರ್ಜುನ ಬಂಡಿವಡ್ಡರ, ಮಲ್ಲೇಶ ಜಾಲಿಕಟ್ಟಿ, ಮಲ್ಲನಗೌಡ ತುಂಬದ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಆರ್.ಡಿ.ಬಾಬು ಮುಂತಾದವರು ಉಪಸ್ಥಿತರಿದ್ದರು.