Advertisement

ಅಧಿವೇಶನದ ಒಳಗೆ, ಹೊರಗೆ ಸರ್ಕಾರದ ವಿರುದ್ಧ ಹೋರಾಟ

06:20 AM Dec 09, 2018 | Team Udayavani |

ಬೆಂಗಳೂರು : ಬೆಳಗಾವಿ ಅಧಿವೇಶನದ ಮೊದಲ ದಿನ ರೈತರೊಂದಿಗೆ ಸೇರಿ ಸುವರ್ಣ ಸೌಧ ಮುತ್ತಿಗೆ ಹಾಕಲಿದ್ದೇವೆ. ಪಕ್ಷದ ಹಿರಿಯ ನಾಯಕರ ನಿರ್ಧಾರದಂತೆ ಅಧಿವೇಶನದ ಒಳಗೆ ಮತ್ತು ಹೊರಗೆ ಎರಡೂ ಕಡೆಗಳಲ್ಲೂ ಸರ್ಕಾರದ ವೈಫ‌ಲ್ಯದ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸ್‌ ಹಗರಣದ ಬಗ್ಗೆ ಮುಖ್ಯಮಂತ್ರಿ ಚಕಾರ ಎತ್ತುತ್ತಿಲ್ಲ. ಕಾರಣ ತಮ್ಮ ಆಪ್ತ ಸಚಿವರೊಬ್ಬರು ಖೇಣಿಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ತಿಳಿದಿರಬೇಕು ಎಂದು ಟೀಕಿಸಿದರು.ಶಾಲಾ ಮಕ್ಕಳ ಎರಡನೇ ಸೆಟ್‌ ಸಮವಸ್ತ್ರಕ್ಕೆ ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಆರೋಪಿಸಲಾಗುತ್ತಿದೆ. ಆದರೆ, ಶಾಲಾ ಸಮವಸ್ತ್ರಕ್ಕೆ ಮೀಸಲಿಟ್ಟಿರುವ 1007 ಕೋಟಿ ರೂ.ಗಳಲ್ಲಿ 557 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಬಳಕೆ ಮಾಡಿದ ಪ್ರಮಣ ಪತ್ರ ಕೇಂದ್ರಕ್ಕೆ ಸಲ್ಲಿಸಿದರೆ ಉಳಿದ ಹಣವೂ ಬಿಡುಗಡೆಯಾಗುತ್ತದೆ. ರಾಜಕೀಯವಾಗಿ ಬೆಳೆ ಬೇಯಿಸಿಕೊಳ್ಳಲು ಅನುದಾನ ಬಂದಿಲ್ಲ ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಮೂಲಕ 2014ರಿಂದ 2018ರ ವರೆಗೆ ರಾಜ್ಯಕ್ಕೆ 5668.66 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಎಸ್‌ಡಿಆರ್‌ಎಫ್ನಿಂದ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವುದು ಕೇವಲ 799.99  ಕೋಟಿ ರೂ. ಕೇಂದ್ರ ಸರ್ಕಾರ ಹೆದ್ದಾರಿ ಕಾಮಗಾರಿಗೆ 37 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಯುಪಿಎ ಆಡಳಿತಾವಧಿಯ ಹತ್ತು ವರ್ಷದಲ್ಲಿ ರಾಜ್ಯಕ್ಕೆ ಎನ್‌ಡಿಆರ್‌ಎಫ್ ಮೂಲಕ ಬಂದಿರುವ ಹಣ 3579.86 ಕೋಟಿ ರೂ. ಮಾತ್ರ. ಇಷ್ಟಾದರೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ನಿಂತಿಲ್ಲ ಎಂದು ಆರೋಪಿಸಿದರು.

ಬಾಂಗ್ಲಾ  ನುಸುಳುಕೋರರ ಬಗ್ಗೆ ಚುನಾವಣೆ ಪೂರ್ವದಲ್ಲಿ ಆಡಿದ ಮಾತುಗಳನ್ನು ಮುಖ್ಯಮಂತ್ರಿಗಳು ಮರೆತು ಬಿಟ್ಟಿದ್ದಾರೆ. ಈ ಬಗ್ಗೆ ಸರ್ಕಾರ ಹೆಚ್ಚಿನ ಗಮನ ನೀಡಬೇಕೆಂದೂ ಅವರು ಹೇಳಿದರು.

ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ
ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆಗಳೆಲ್ಲವೂ ಬಿಜೆಪಿಗೆ 80 ಮೇಲೆ ಸೀಟು ಬರುವುದಿಲ್ಲ ಎಂದಿತ್ತು. ಆದರೆ, ಬಿಜೆಪಿ 104 ಸೀಟು ಪಡೆದಿತ್ತು. ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತಿಸ್‌ಗಡ್‌ನ‌ಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಲೋಕಸಭೆ ಚುನಾವಣೆಯ ಆಕಾಂಕ್ಷಿ ನಾನಲ್ಲ. ಪಕ್ಷ ಹೇಳಿದಂತೆ ಕೆಲಸ ಮಾಡುತ್ತಿದ್ದೇನೆ. ಚಿಕ್ಕಮಗಳೂರಿನ ಶಾಸಕನಾಗಿದ್ದೇನೆ. ಇನ್ನೂ ನಾಲ್ಕುವರೆ ವರ್ಷ ಅವಧಿ ಇದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷ ಸೂಚಿಸಿದರೆ ಮಂಡ್ಯ, ಹಾಸನ ಎಲ್ಲಿಯಾದರೂ ಸರಿ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next