Advertisement

ಕರಸೇವಕಪುರಂ ವಿಶೇಷ;ಅಯೋಧ್ಯೆಯಲ್ಲಿ ಮೂರು ದಶಕಗಳ ಕಾಲ ಕೇಳಿಸುತ್ತಿತ್ತು ಕಲ್ಲು ಕೆತ್ತನೆ ಶಬ್ದ!

12:26 PM Aug 04, 2020 | Nagendra Trasi |

ನವದೆಹಲಿ:ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಇದೀಗ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈಗಾಗಲೇ ಸಿದ್ಧತೆಯೂ ಪೂರ್ಣಗೊಂಡಿದ್ದು, ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಏತನ್ಮಧ್ಯೆ ರಾಮಮಂದಿರಕ್ಕಾಗಿ ಕಳೆದ ಮೂರು ದಶಕಗಳಿಂದ ಕಲ್ಲುಗಳನ್ನು ಕೆತ್ತುತ್ತಿದ್ದ “ಕರಸೇವಕಪುರಂನ” ಕುರಿತ ವಿವರ ಇಲ್ಲಿದೆ.

Advertisement

ಅಯೋಧ್ಯೆಯಲ್ಲಿನ ಕರಸೇವಕಪುರಂನಲ್ಲಿ ಸತತವಾಗಿ 30 ವರ್ಷಗಳ ಕಾಲ ಕಲ್ಲು ಕೆತ್ತನೆ ಕೆಲಸ ನಡೆಯುತ್ತಿದೆ. 1990ರಿಂದ ನಿರಂತರವಾಗಿ ನಡೆಯುತ್ತಿದ್ದ ಕೆಲಸ 2019ರ ನವೆಂಬರ್ ನಲ್ಲಿ ಸ್ಥಗಿತಗೊಳಿಸುವಂತೆ ರಾಮ್ ಜನ್ಮಭೂಮಿ ನ್ಯಾಸ್ ನಿರ್ಧಾರ ತೆಗೆದುಕೊಂಡಿದ್ದು, ಬಿಟ್ಟರೆ ಉಳಿದಂತೆ ಅಮಾವಾಸ್ಯೆಯಂದು ಕೆಲಸಗಾರರಿಗೆ ರಜೆ ಕೊಡಲಾಗುತ್ತಿತ್ತಂತೆ. ಮಿಕ್ಕ ದಿನಗಳಲ್ಲಿ ಬೆಳಗ್ಗೆ 7ಗಂಟೆಯಿಂದ ಸಂಜೆ 5ಗಂಟೆವರೆಗೆ ನಿರಂತರವಾಗಿ ಕಲ್ಲು ಕೆತ್ತನೆ ಕೆಲಸ ನಡೆಯುತ್ತಿತ್ತು.

ಸುಪ್ರೀಂಕೋರ್ಟ್ ತೀರ್ಪು ಯಾವ ರೀತಿ ಹೊರಬೀಳಲಿದೆ ಎಂದು ಕಾಯುವ ನಿಟ್ಟಿನಲ್ಲಿ 2019ರಲ್ಲಿ ಕಲ್ಲು ಕೆತ್ತನೆ ಕೆಲಸ ನಿಲ್ಲಿಸಲು ರಾಮ್ ಜನ್ಮಭೂಮಿ ನ್ಯಾಸ್ ನಿರ್ಧರಿಸಿತ್ತು. ಈಗಾಗಲೇ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಟ್ರಸ್ಟ್ ರಚನೆಗೊಂಡು ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಗೆ ಸಿದ್ಧತೆ ನಡೆಸಲಾಗುತ್ತಿದೆ. ಜತೆಗೆ ಕಲ್ಲು ಕೆತ್ತನೆ ಕೆಲಸವೂ ಮುಂದುವರಿದಿದೆ.

ಕರಸೇವಕಪುರಂನಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಹೆಚ್ಚಿನ ಮಂದಿ ಗುಜರಾತ್ ನವರು. ಕಲ್ಲು ಕಂಬಗಳ ಕೆತ್ತನೆ, ಸೀಲಿಂಗ್ ಸ್ಲ್ಯಾಬ್ಸ್, ನೆಲಹಾಸು, ಮೆಟ್ಟಿಲುಗಳ ಕೆತ್ತನೆ ಕಾರ್ಯ ಮುಗಿದಿದೆ. ಪ್ರಸ್ತಾವಿತ ರಾಮಂದಿರ ನಿರ್ಮಾಣದಲ್ಲಿ ಕಲ್ಲು, ಇಟ್ಟಿಗೆ ಬಿಟ್ಟರೆ ಯಾವುದೇ ಕಬ್ಬಿಣದ ವಸ್ತುಗಳ ಬಳಕೆ ಮಾಡಿಲ್ಲ ಎಂಬುದು ವಿಶೇಷ.

Advertisement

ಸುಮಾರು 1.25 ಲಕ್ಷ ಕ್ಯೂಬಿಕ್ ಅಡಿ ಕಲ್ಲುಗಳ ಕತ್ತನೆ ಕೆಲಸ ಪೂರ್ಣಗೊಂಡಿದೆ. ಅಂದರೆ ರಾಮದೇವಾಲಯದ ಒಂದು ಹಂತಕ್ಕೆ ಬೇಕಾಗುವಷ್ಟು ಕಲ್ಲು ಕೆತ್ತನೆ ಕೆಲಸ ಪೂರ್ಣಗೊಂಡಿದೆ. ಕರಸೇವಕಪುರಂಗೂ ರಾಮಮಂದಿರ ಸ್ಥಳಕ್ಕೆ 3 ಕಿಲೋ ಮೀಟರ್ ನಷ್ಟು ದೂರವಿದೆ. ನೀಲನಕ್ಷೆ ಪ್ರಕಾರ, ಒಂದು ಬಾರಿ ದೇವಸ್ಥಾನ ನಿರ್ಮಾಣಗೊಂಡರೆ ಅದು 268 ಅಡಿ ಉದ್ದ, 140 ಅಡಿ ಅಗಲ ಹಾಗೂ 128 ಅಡಿ ಎತ್ತರ ಬೃಹತ್ ಮಂದಿರವಾಗಲಿದೆ. ನೆಲ ಅಂತಸ್ತಿನಿಂದ ಮೂರನೇ ಅಂತಸ್ತಿನವರೆಗೆ ಒಟ್ಟು 212 ಪಿಲ್ಲರ್ ಗಳ ಅಗತ್ಯವಿದೆ ಎಂದು ವರದಿ ತಿಳಿಸಿದೆ.

ಪ್ರತೀ ಪ್ಲೋರ್ ಗೆ 106 ಪಿಲ್ಲರ್ಸ್ ಗಳ ಅಗತ್ಯವಿದ್ದು, ಪ್ರತಿ ಕಂಬದಲ್ಲಿ 16 ಪ್ರತಿಮೆ ಕೆತ್ತಲಾಗಿದೆ. ಬಹುತೇಕ ಸ್ವಯಂ ಆಗಿ ದೇಣಿಗೆ ನೀಡುವ ಮೂಲಕ ಹಣ ಸಂಗ್ರಹಿಸಲಾಗಿತ್ತು. ಆದರೆ ಈಗ ಹೆಚ್ಚು ಹಣ ಸಂಗ್ರಹಿಸಿಲ್ಲ, ಇದೆಲ್ಲವೂ ಮೊದಲು ಸಂಗ್ರಹವಾಗಿದ್ದ ಹಣ ಎಂದು 80ವರ್ಷದ ಸೋಮ್ ಪುರ್ ತಿಳಿಸಿದ್ದಾರೆ.

1990ರಲ್ಲಿ 150ಕ್ಕಿಂತಲೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿದ್ದರು. ಭೂಮಿ ಪೂಜೆ ನೆರವೇರಿಸಿದ ಮೇಲೆ ರಾಮಮಂದಿರ ಪೂರ್ಣಗೊಳ್ಳಲು ಕನಿಷ್ಠ ಮೂರು ವರ್ಷಗಳು ಬೇಕಾಗಬಹುದು ಎಂದು ಸೋಂಪುರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಕರಸೇವಕಪುರಂನಲ್ಲಿ 1990ರ ದಶಕದಲ್ಲಿಯೇ ನಸುಗೆಂಪು ಮರಳುಕಲ್ಲಿನಲ್ಲಿ ಕೆತ್ತನೆ ಮಾಡಿ ಇಡಲಾಗಿದೆ. ಆದರೆ ಇದೀಗ ಅದು ದಶಕಗಳೇ ಕಳೆದಿರುವುದರಿಂದ ಕಪ್ಪು ಬಣ್ಣಕ್ಕೆ ತಿರುಗಿದ್ದು, ಬಳಕೆ ಮಾಡುವ ವೇಳೆ ಪುನಃ ಸ್ವಚ್ಛಗೊಳಿಸಬೇಕಾದ ಅಗತ್ಯವಿದೆಯಂತೆ. ಕೆಲಸ ನಡೆಯುತ್ತಿದ್ದ ಆವರಣದ ಕೊನೆಯಲ್ಲಿ ಉಪಯೋಗಿಸಿರುವ ಇಟ್ಟಿಗೆಯಲ್ಲಿ ಶ್ರೀರಾಮ್ ಮಂತ್ರದ ಅಕ್ಷರವನ್ನು ಕೆತ್ತಿಡಲಾಗಿದೆ. ಬಿಳಿ ಮಾರ್ಬಲ್ಸ್ ಅನ್ನು ದ್ವಾರಬಾಗಿಲು ಫ್ರೇಮ್ಸ್ ನಲ್ಲಿ ಉಪಯೋಗಿಸಲಾಗುತ್ತದೆ. ಕಲ್ಲುಗಳನ್ನು ರಾಜಸ್ಥಾನದ ಬನ್ಸಿ ಪಾರಾಪುರದಿಂದ ತರಲಾಗಿದೆ. ದಿನಂಪ್ರತಿ ಕರಸೇವಕಪುರಂನಲ್ಲಿರುವ ಕಾರ್ಯಶಾಲಾಕ್ಕೆ ಒಂದು ಸಾವಿರಕ್ಕೂ ಅಧಿಕ ಮಂದಿ ಭೇಟಿ ಕೊಡುತ್ತಿದ್ದರಂತೆ. ಇದರಿಂದಾಗಿ ರಾಮಜನ್ಮಭೂಮಿಯಲ್ಲಿ ಬೃಹತ್ ಆಗಿ ತಲೆಎತ್ತಲಿರುವ ರಾಮಮಂದಿರ ಕೆಲಸ ಪೂರ್ಣಗೊಂಡ ನಂತರ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿರುವುದಾಗಿ ಸೋಂಪುರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next