Advertisement

 ತೆಂಗು ಬೆಳೆಯಲ್ಲಿ ಕೀಟಬಾಧೆ ಮಾಹಿತಿ ಶಿಬಿರ

01:41 PM Nov 01, 2017 | |

ಎಕ್ಕೂರು: ತೆಂಗು ಬೆಳೆಯಲ್ಲಿ ಕಂಡು ಬರುವ ಆಕ್ರಮಣಕಾರಿ ರುಗೋಸ್‌ ಸುರುಳಿಯಾಕಾರದ ಬಿಳಿ ಕೀಟ (ನೊಣ) ಬಾಧೆ ತಡೆಯಲು ಪರಾವಲಂಬಿ ಜೀವಿಗಳ ಸಂತತಿ ಹೆಚ್ಚಳವೇ ಪರಿಹಾರೋಪಾಯ ಎಂದು ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋದ (ಎನ್‌ಬಿಎಐಆರ್‌) ಹಿರಿಯ ವಿಜ್ಞಾನಿ ಡಾ| ಕೆ. ಸೆಲ್ವರಾಜ್‌ ಹೇಳಿದರು.

Advertisement

ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಸಹಯೋಗದಲ್ಲಿ ಎಕ್ಕೂರಿನ ಕೆವಿಕೆ ಸಭಾಂಗಣದಲ್ಲಿ ಆಯೋಜಿಸಲಾದ ‘ತೆಂಗು ಬೆಳೆಯಲ್ಲಿ ಬಿಳಿ ನೊಣ ಬಾಧೆ’ ಕುರಿತು ಮಾಹಿತಿ ಶಿಬಿರದಲ್ಲಿ ಅವರು ಮಂಗಳವಾರ ಮಾತನಾಡಿದರು.

ತೆಂಗು ಬೆಳೆಗೆ ಬಿಳಿನೊಣ ಬಾಧೆ ಹೆಚ್ಚುತ್ತಿರುವುದು ಆತಂಕಕಾರಿ. ಇದರ ನಿಯಂತ್ರಣಕ್ಕಾಗಿ ಕೀಟನಾಶಕ ಬಳಕೆ
ಮಾಡುವುದರಿಂದ ಬೆಳೆ ಹಾನಿ ಯಾಗುತ್ತದೆ. ಆದ್ದರಿಂದ ಈ ಕೀಟಗಳನ್ನು ತಿನ್ನುವ ಪರಾವಲಂಬಿ ಜೀವಿಗಳ ಸಂತತಿ ಹೆಚ್ಚಿಸುವುದೇ ಪರಿಹಾರ ಮಾರ್ಗ ಎಂದರು.

‘ಎನ್ಕಾರ್ಸಿಯಾ ಗ್ವಾಡೆಲೊಪೆ’ ಹಾಗೂ ‘ಎನ್ಕಾರ್ಸಿಯಾ ಡಿಸ್ಪರ್ಸಾ’ ಎಂಬ ಎರಡು ಪರಾವಲಂಬಿ ಕೀಟಗಳು ಬಿಳಿನೊಣದ ಮೊಟ್ಟೆಗಳನ್ನು ತಿಂದು ಬದುಕುವುದರಿಂದ ಈ ಕೀಟಗಳ ಸಂತತಿ ಬೆಳೆಯುವಂತೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಇನ್ನೋರ್ವ ವಿಜ್ಞಾನಿ ಡಾ| ಎ. ಎನ್‌. ಶೈಲೇಶ್‌ ಮಾತನಾಡಿ, ಬಾಳೆ, ಅಡಕೆ, ಕೊಕ್ಕೋ ಗಿಡಗಳಲ್ಲಿಯೂ ಬಿಳಿಕೀಟಗಳು
ಸಂತಾನೋತ್ಪತ್ತಿ ಮಾಡುತ್ತಿದೆ. ಈ ಕೀಟ ರಸ ಹೀರಿ ಅದನ್ನು ವಿಸರ್ಜಿಸುವುದರಿಂದ ಅಡಿ ಭಾಗದಲ್ಲಿರುವ ಬಾಳೆ ಎಲೆ,
ತೆಂಗಿನ ಗರಿಗಳ ಮೇಲೆ ಕಪ್ಪು ಕಲೆಗಳು ಉಂಟಾಗುತ್ತವೆ. ಬಾಳೆ ಎಲೆ ಮೇಲೆ ಇಂತಹ ಕಲೆಗಳು ಬಿದ್ದರೆ ಮಾರಾಟಕ್ಕೂ
ಅಡಚಣೆಯಾಗುತ್ತದೆ. ಆದರೆ ಎಲೆಗಳ ಮೇಲೆ ಗಂಜಿ ತಿಳಿಯನ್ನು ಸಿಂಪಡಿಸಿದರೆ ಕಲೆ ತೆಗೆಯಲು ಸಾಧ್ಯ ಎಂದರು.

Advertisement

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಶಿವಕುಮಾರ್‌ ಮಗದ ಉಪಸ್ಥಿತರಿದ್ದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್‌. ಆರ್‌. ನಾಯ್ಕ ಪ್ರಸ್ತಾವಿಸಿದರು. ಪ್ರದೀಪ್‌ ಡಿ’ಸೋಜಾ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next