Advertisement
ಹೌದು, ಒಂದೊಮ್ಮೆ ಕಾಲೇಜಿನ ತರಗತಿ ಕೋಣೆಯೊಳಗೆ ಪ್ರವೇಶಿಸಿ ಅಲ್ಲಿರುವ ಬೆಂಚು-ಡೆಸ್ಕಾಗಳನ್ನು ಸರ್ವೆ ಮಾಡಿದರೆ ಸಾಮಾನ್ಯವಾಗಿ ಸಾವಿರಕ್ಕೂ ಹೆಚ್ಚು ಮೌನಭಾವನೆಗಳಿಗೆ ಈ ಮೂಲಕ ಬರವಣಿಗೆ ರೂಪವನ್ನು ವಿದ್ಯಾರ್ಥಿಗಳು ನೀಡಿರುತ್ತಾರೆ. ವಿದ್ಯಾರ್ಥಿಗಳು ತಮ್ಮೆಲ್ಲಾ ತುಮುಲಗಳನ್ನು ಅಕ್ಷರ ರೂಪದಲ್ಲಿ ಡೆಸ್ಕ್ಗಳ ಮೇಲೆ ಭಟ್ಟಿ ಇಳಿಸಿರುತ್ತಾರೆ. ಯಾವ ಡೆಸ್ಕ್ ಮೇಲೆ ಕಣ್ಣಾಡಿಸಿದರೂ ಇಂತಹ ಪದಮಾಲೆಗಳೇ ಕಾಣಸಿಗುತ್ತವೆ. ಕೆಲ ಬರಹಗಳನ್ನು ಓದುವಾಗಲಂತೂ ಮಂದಹಾಸ ಬೀರಿಸುವುದು ಸಹಜ.
Related Articles
Advertisement
ವಿದ್ಯಾರ್ಥಿಗಳು ಇದರಿಂದ ಆನಂದಿಸಬಹುದು. ಆದರೂ ಕೂಡ ಡೆಸ್ಕ್ ಎನ್ನುವಂಥದ್ದು ಕೇವಲ ಒಬ್ಬರ ಆಸ್ತಿಯಲ್ಲ. ವಿದ್ಯಾರ್ಥಿಗಳಿಗೆ ಓದಲು-ಬರೆಯಲು ಸಹಾಯಕವಾಗುವ ಕಾರಣಕ್ಕಾಗಿ ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲೂ ಈ ವ್ಯವಸ್ಥೆ ಮಾಡಲಾಗಿದೆ. ಇವುಗಳ ತಯಾರಿಕೆಯ ಹಿಂದೆಯೂ ಹಲವಾರು ಕೈಗಳ ಅವಿರತ ಶ್ರಮವಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಸದುದ್ದೇಶದಿಂದ ಬಳಕೆಗೆ ಬಂದಿರುವ ಈ ವ್ಯವಸ್ಥೆಯನ್ನು ಅನಗತ್ಯ ಕೆಲಸಕ್ಕೆ ಬಳಸಿಕೊಳ್ಳುವುದು ಸರಿಯೆ?
ಹಿಂದೆ ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ನೆಲದಲ್ಲೇ ಕುಳಿತು ಪಾಠ ಕೇಳಬೇಕಿತ್ತು.ಡೆಸ್ಕ್ ಗಳೇ ಇರಲಿಲ್ಲ. ಏನಾದರೂ ಬರೆಯಬೇಕು ಎನಿಸಿದರೆ ನಮ್ಮ ಬಳಿ ಇದ್ದ ಪುಸ್ತಕದ ಮೇಲೆಯೇ ನಮ್ಮ ಸಾಹಸ ಪ್ರದರ್ಶನವಾಗುತ್ತಿತ್ತು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ಡೆಸ್ಕ್ ಸೌಲಭ್ಯ ಇದೆ. ವಿಪರ್ಯಾಸವೆಂದರೆ, ಇದು ಸದ್ಭಳಕೆ ಆಗುತ್ತಿರುವ ಪ್ರಮಾಣದಲ್ಲಿ ಏರುಪೇರು ಉಂಟಾಗಿದೆ. ಪುಟ್ಟಮಕ್ಕಳು ಕೂಡ ಪುಸ್ತಕದ ಮೇಲೆ ಬರೆಯುವ ಬದಲು ಡೆಸ್ಕ್ ಗಳ ಮೇಲೆಯೇ ಬರೆಯುವ ರೂಢಿಯನ್ನು ಮಾಡಿಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಂತೂ ಇದೇ ಅಭ್ಯಾಸವನ್ನು ಪಾಲಿಸುವಂತಿದೆ.
ಡೆಸ್ಕ್ ನಮ್ಮ ಶೈಕ್ಷಣಿಕ ಜಗತ್ತಿನ ಒಂದು ಭಾಗ. ಇದು ನಮ್ಮ ಕಲಿಕೆಯ ವೇಳೆ ಒಂದು ಮಹತ್ತರ ಪಾತ್ರವನ್ನು ನಿಭಾಯಿಸುತ್ತದೆ ಎನ್ನುವ ವಿಚಾರದಲ್ಲಿ ಸಂಶಯವಿಲ್ಲ. ಆದರೂ ಹರೆಯದ ವಿದ್ಯಾರ್ಥಿಗಳು ಡೆಸ್ಕ್ ನ್ನು ಆಟದ ಸಾಮಗ್ರಿಯಂತೆ ಬಳಸಿಕೊಳ್ಳುವ ಬದಲು ತಮ್ಮ ಮನದಲ್ಲಿ ಅದೇನೇ ಯೋಚನೆಗಳಿದ್ದರೂ ಕೂಡ ಪುಸ್ತಕದ ಮೇಲೆ ಗೀಚಿಬಿಟ್ಟರೆ ಅಕ್ಷರದ ಜೊತೆಗೆ ಜ್ಞಾನಮಟ್ಟ ಕೂಡ ಅಭಿವೃದ್ಧಿ ಹೊಂದುತ್ತದೆಯಲ್ಲವೇ?
ಡೆಸ್ಕ್ ಮೇಲೆ ವಿನಾ ಕಾರಣ ಏನೇನೋ ಬರೆದಿಡುವುದು, ಅದನ್ನು ಇನ್ಯಾರೋ ಓದುವುದು, ಒಬ್ಬರನ್ನು ಕಂಡು ಇನ್ನೊಬ್ಬರು ಅದೇ ಚಾಳಿಯನ್ನು ಆರಂಭಿಸಿಕೊಳ್ಳುವುದು, ಅಧ್ಯಾಪಕರು ನೋಡಿ ಬೈಯೋದು, ಯಾವುದಾದರೂ ಸ್ವತ್ಛತಾ ತಂಡ ತರಗತಿಗೆ ಪ್ರವೇಶಿಸಿ ಆ ಅಕ್ಷರಮಾಲೆಗಳ ನೋಡಿ ಛೀಮಾರಿ ಹಾಕುವುದು, ಅದನ್ನ ಅಳಿಸಲು ಒಂದಷ್ಟು ಸಮಯವನ್ನು ವ್ಯರ್ಥ ಕಳೆಯುವುದು- ಈ ಎಲ್ಲಾ ಕೆಲಸಗಳು ಮತ್ತೆ ದೊರೆಯುವುದು ನಮ್ಮಂತಹ ವಿದ್ಯಾರ್ಥಿಗಳ ಕೈಗೇ ಅಲ್ಲವೇ? ಇದರ ಬದಲು ನಮ್ಮ ಭಾವನೆಗಳ ವ್ಯಕ್ತತೆಗೆ ಅಮೂಲ್ಯವಾದ ಪುಸ್ತಕವನ್ನು ಬಳಸಿಕೊಂಡು, ಡೆಸ್ಕ್ ಗೂ ಸಮಾನ ಗೌರವವನ್ನೊದಗಿಸೋಣವಲ್ಲವೆ?
ಯೋಚನೆ-ಆಲೋಚನಾ ಲಹರಿಗೆ ತಡೆ ಬೇಡ. ಯೋಚಿಸಿದ್ದಷ್ಟು ಜ್ಞಾನ ಹೆಚ್ಚಾಗುವುದು. ನಮ್ಮ ಬರವಣಿಗೆಗೂ ತಡೆ ಬೇಡ. ಆದರೆ ಈ ಬರವಣಿಗೆ ಕಲೆ ಪುಸ್ತಕದ ಮೇಲೆಯೋ ಅಥವಾ ಪತ್ರಿಕೆಯ ಮೇಲೆಯೋ ಮೂಡಿ ಬಂದರೆ ಚೆನ್ನ.
ಪ್ರಜ್ಞಾ ಓಡಿಲಾ°ಳತೃತೀಯ ಪತ್ರಿಕೋದ್ಯಮ ಬಿ. ಎ.
ಎಸ್‌ಡಿಎಂ ಕಾಲೇಜು, ಉಜಿರೆ.