ಸಿಂಧನೂರು: ತಾಲೂಕಿಗೂ ವಿಜಯನಗರ ಸಾಮ್ರಾಜ್ಯದ ನಂಟಿತ್ತು ಎನ್ನುವ ಪೂರಕ ದಾಖಲೆ ಒದಗಿಸುವ ಮತ್ತೊಂದು ಶಾಸನ ನಗರ ವ್ಯಾಪ್ತಿಯ ಜಮೀನೊಂದರಲ್ಲಿ ಪತ್ತೆಯಾಗಿದೆ.
ಶಾಸನದಲ್ಲಿ ವಿಜಯನಗರ ಕಾಲದ ಬೇಟೆಯ ಕಲ್ಲು, ವರಾಹ ಗುರುತು ಕೆತ್ತಲಾಗಿದೆ. ಜತೆಗೆ ವಿಸ್ತೃತ ಬರಹಗಳಿವೆ. ವಿಜಯನಗರ ಕಾಲದ ಅರಸರ ರಾಜಮುದ್ರೆ ವರಾಹ ಆಗಿತ್ತು. ಆದೇ ಗುರುತು ಈ ಶಾಸನದಲ್ಲೂ ಪತ್ತೆಯಾಗಿದೆ.
ಜತೆಗೆ, ಕತ್ತಿ (ಖಡ್ಗ)ಯ ರೂಪದ ಕೆತ್ತನೆಗಳೂ ಶಾಸನದಲ್ಲಿ ಕಂಡುಬಂದಿವೆ. ಶಾಸನದಲ್ಲಿ ಕುದುರೆ ಕೆತ್ತನೆಯೂ ಇದೆ. ಅಂದಿನ ಕಾಲದ ವಿಜಯನಗರ ಅರಸರು ಸೇರಿದಂತೆ ರಾಜರು ಪ್ರವಾಸ ಸಂದರ್ಭ ಆಯಾ ಪ್ರದೇಶದಲ್ಲಿ ಶಾಸನ ಉಳಿಸಿ ಹೋಗುತ್ತಿದ್ದರು. ಅಂತಹ ಸಂದರ್ಭದಲ್ಲೇ ಈ ಶಾಸನ ಕೆತ್ತನೆ ಮಾಡಿರಬೇಕು ಎಂದು ಇತಿಹಾಸ ತಜ್ಞರು ಪ್ರಾಥಮಿಕವಾಗಿ ಹೇಳುತ್ತಿದ್ದಾರೆ.
ಇದನ್ನೂ ಓದಿ: ಕಾಫಿನಾಡಿನಲ್ಲಿ ಹೆಚ್ಚುತ್ತಿರುವ ಹುಲಿ ದಾಳಿ: ಸಾರ್ವಜನಿಕರಲ್ಲಿ ಆತಂಕ
ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿವಿಯ ಡಾ|ನಾಗರಾಜ್ ಈಗಾಗಲೇ ಅಧ್ಯಯನ ಕೈಗೊಂಡಿದ್ದಾರೆ. ಪತ್ತೆಯಾಗಿರುವ ಶಾಸನ ಕೂಡ ವಿವಿಗೆ ತರಲು ಮುಂದಾಗಿದ್ದಾರೆ. ಹಂಪಿ ವಿವಿಯ ತಜ್ಞರೊಟ್ಟಿಗೂ ಶನಿವಾರ ಚರ್ಚಿಸಿದ್ದಾರೆ. ಬೇಟೆಯಾಡಿ ಹೋದ ಸಂಕೇತವಾಗಿ ರಾಜರು ಶಾಸನ ಬಿಟ್ಟು ಹೋಗಿರಬಹುದು. ಆದರೆ, ಯಾವ ಕಾಲದ ರಾಜರು ಮತ್ತು ಯಾರು ಎಂಬ ಇತಿಹಾಸ ಕೆದಕಲಾಗುತ್ತಿದೆ. ಈ ನಡುವೆ ಚಾಲುಕ್ಯರು ಕೂಡ ವರಾಹ ಚಿಹ್ನೆ ಹೊಂದಿದ್ದರು. ಆ ಬಗ್ಗೆಯೂ ಅಧ್ಯಯನ ನಡೆಯಬೇಕಿದೆ.
ಶಾಸನದಲ್ಲಿ ಕುದುರೆ ಇರುವುದರಿಂದ ವಿಜಯನಗರ ಅರಸರ ಕಾಲದ್ದೆಂದು ಗೊತ್ತಾಗುತ್ತದೆ. ಆದರೆ, ಓದಣಿಕೆ ಮೂಲಕವೇ ಅದನ್ನು ಸ್ಪಷ್ಟಪಡಿಸಬೇಕಿದೆ. ವಿವಿಯಲ್ಲೇ ಈ ಬಗ್ಗೆ ಅಧ್ಯಯನ ನಡೆಸಿ, ಬಹಿರಂಗಪಡಿಸಲಾಗುವುದು.
-ಡಾ| ನಾಗರಾಜ್, ಆಡಳಿತ ಅಧಿಕಾರಿಗಳು, ಅಕ್ಕಮಹಾದೇವಿ ಪಿಜಿ ಸೆಂಟರ್, ಸಿಂಧನೂರು