ನವದೆಹಲಿ: ‘ಮಿಷನ್ ಸಾಗರ್’ ಮೂಲಕ ದ್ವೀಪರಾಷ್ಟ್ರಗಳ ಕೈಹಿಡಿದ ಭಾರತ ; ಮಾಲ್ಡೀವ್ಸ್, ಮಡಗಾಸ್ಕರ್, ಕೊಮೊರಾಸ್, ಸೆಷೆಲ್ಸ್‌ಗೆ ನೆರವು ಕೋವಿಡ್ ವೈರಸ್ ನಿಂದ ಪ್ರವಾಸೋದ್ಯಮ ನೆಲಕಚ್ಚಿ ಕಂಗಾಲಾಗಿ ಕುಳಿತಿರುವ ಹಿಂದೂ ಮಹಾಸಾಗರದ ದ್ವೀಪರಾಷ್ಟ್ರಗಳಿಗೆ ಭಾರತ ಕೈಹಿಡಿದಿದೆ.
‘ಮಿಷನ್ ಸಾಗರ್’ ಯೋಜನೆ ಅಡಿಯಲ್ಲಿ ಮಾಲ್ಡೀವ್ಸ್‌ಗೆ 580 ಟನ್ ಜೀವನಾವಶ್ಯಕ ಆಹಾರೋತ್ಪನ್ನಗಳನ್ನು ಐಎನ್‌ಎಸ್ ಕೇಸರಿ ಮೂಲಕ ಕೇಂದ್ರ ಸರ್ಕಾರ ಕಳಿಸಿಕೊಟ್ಟಿದೆ.
‘ಐಎನ್‌ಎಸ್ ಕೇಸರಿ ಹಡಗು ಮಾಲೆ ಬಂದರನ್ನು ತಲುಪಿದೆ. 580 ಟನ್ ಆಹಾರವನ್ನು ಭಾರತೀಯರು ಕೊಡುಗೆಯಾಗಿ ಕಳುಹಿಸಿದ್ದಾರೆ’ ಎಂದು ಮಾಲ್ಡೀವ್ಸ್ ಸರ್ಕಾರ ಟ್ವೀಟ್‌ನಲ್ಲಿ ಹರ್ಷ ವ್ಯಕ್ತಪಡಿಸಿದೆ.
ಆಹಾರ ಮಾತ್ರವಲ್ಲ: ಅಗತ್ಯ ಆಹಾರೋತ್ಪನ್ನಗಳೊಂದಿಗೆ, ವೈದ್ಯಕೀಯ ಸಹಾಯಕ ತಂಡ, ಔಷಧಗಳನ್ನು ತುಂಬಿಕೊಂಡ ಐಎನ್‌ಎಸ್ ಕೇಸರಿ, ಭಾನುವಾರವಷ್ಟೇ ಭಾರತದಿಂದ ಹೊರಟಿತ್ತು. ಮಾಲ್ಡೀವ್ಸ್‌ನ ಬಳಿಕ ಸುತ್ತಮುತ್ತಲಿನ ದ್ವೀಪರಾಷ್ಟ್ರಗಳಿಗೂ ಭಾರತ ಅಗತ್ಯ ವಸ್ತುಗಳನ್ನು ಪೂರೈಸಲಿದೆ.
ಏನಿದು ಮಿಷನ್ ಸಾಗರ್?: ಇದು ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ. ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಮಾಲ್ಡೀವ್ಸ್, ಮಾರಿಷಸ್, ಮಡಗಾಸ್ಕರ್, ಕೊಮೊರಾಸ್, ಸೆಷೆಲ್ಸ್ ರಾಷ್ಟ್ರಗಳು ಭಾರತದಿಂದ ನೆರವನ್ನು ಕೋರಿದ್ದವು. ‘ಮಿಷನ್ ಸಾಗರ್’ ಯೋಜನೆಯಡಿ ಭಾರತ ಸಹಾಯ ಹಸ್ತ ಚಾಚುತ್ತಿದೆ.