Advertisement
ಪರಮೇಶ್ವರ್ ಬಳಿ ಅನಿಲ್ ಸುಮಾರು ವರ್ಷಗಳಿಂದ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮೃತ ರಮೇಶ್ ಹಾಗೂ ಅನಿಲ್ ಉತ್ತಮ ಸ್ನೇಹಿತರಾಗಿದ್ದರು. ರಮೇಶ್ ಆಪ್ತವಲಯಗಳ ಬಗ್ಗೆ ಮಾಹಿತಿ ಪಡೆಯಲು ಅನಿಲ್ ವಿಚಾರಣೆ ಮಾಡಿ ಕಳುಹಿಸಿ ಕೊಡಲಾಗಿದೆ. ಇದೊಂದು ಸಾಮಾನ್ಯ ಪ್ರಕ್ರಿಯೆ ಅಷ್ಟೇ ಎಂದು ಪೊಲೀಸರು ಹೇಳಿದರು.
Related Articles
Advertisement
ಅಸಹಜ ಸಾವು ಪ್ರಕರಣ: ರಮೇಶ್ ಆತ್ಮಹತ್ಯೆ ಬೆನ್ನಲ್ಲೇ ಅವರ ಸಹೋದರ, ಕುಟುಂಬ ಸದಸ್ಯರು ಆತ್ಮಹತ್ಯೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಈ ಸಂಬಂಧ ರಮೇಶ್ ಸಹೋದರ ಸತೀಶ್ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಐಟಿ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರಿದ್ದರು.
ಆದರೆ, ತತ್‌ಕ್ಷಣ ಈ ಕುರಿತು ಯಾವುದೇ ಸಾಕ್ಷಗಳು ಸಿಗದ ಹಿನ್ನೆಲೆಯಲ್ಲಿ ಸಿಆರ್‌ಪಿಸಿ 174 ಅಡಿಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಒಂದು ವೇಳೆ ದೂರುದಾರರ ಆರೋಪಕ್ಕೆ ಸೂಕ್ತ ಸಾಕ್ಷ್ಯಗಳು ದೊರೆತರೆ ಹೆಚ್ಚುವರಿಯಾಗಿ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಐಟಿ ಅಧಿಕಾರಿಗಳ ವಿರುದ್ಧ ಅನುಮಾನ: ಅ.10ರ ಮಧ್ಯಾಹ್ನ ಐಟಿ ಅಧಿಕಾರಿಗಳು ರಮೇಶ್ ಅವರ ಉಲ್ಲಾಳ ಮುಖ್ಯ ರಸ್ತೆಯಲ್ಲಿರುವ ಮನೆ ಮೇಲೆ ದಾಳಿ ನಡೆಸಿರುವ ದೃಶ್ಯಗಳು ಮನೆ ಮುಂಭಾಗ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೂ ಐಟಿ ಅಧಿಕಾರಿಗಳು ಯಾವ ಕಾರಣಕ್ಕೂ ದಾಳಿ ನಡೆಸಿಲ್ಲ, ವಿಚಾರಣೆಯೂ ಮಾಡಿಲ್ಲ ಎಂದು ಪತ್ರಿಕಾ ಹೇಳಿಕೆ ಹೊರಡಿಸಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಅಗತ್ಯವಿದ್ದಲ್ಲಿ ಅವರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ನೋಟಿಸ್ ಜಾರಿ: ಸದಾಶಿವನಗರದ ಪರಮೇಶ್ವರ್ ಮನೆಯಿಂದ ಅ.12ರ ಮುಂಜಾನೆ ಐದು ಗಂಟೆಗೆ ಮನೆಗೆ ಬಂದ ರಮೇಶ್ ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದರು. ಬಳಿಕ ಪತ್ನಿ ಜತೆ ಐಟಿ ಅಧಿಕಾರಿಗಳ ವಿಚಾರಣೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಅನಂತರ ಮನೆಯಿಂದ ಹೊರಬಂದು ಇಬ್ಬರು ಸ್ನೇಹಿತರು, ಕೆಲ ಮಾಧ್ಯಮ ಮಿತ್ರರಿಗೂ ಕರೆ ಮಾಡಿದ್ದಾರೆ. ಹೀಗಾಗಿ ಸೋಮವಾರ ಅಥವಾ ಮಂಗಳವಾರ ಎಲ್ಲರಿಗೂ ನೋಟಿಸ್ ಜಾರಿ ಮಾಡಿ ಕಾನೂನು ಬದ್ಧವಾಗಿ ವಿಚಾರಣೆ ನಡೆಸಲಾಗುವುದು. ಇದರೊಂದಿಗೆ ರಮೇಶ್ ಕಾಲ್ ಡಿಟೇಲ್ಸ್ ಆಧರಿಸಿ ಇತರೆ ವ್ಯಕ್ತಿಗಳಿಗೂ ನೋಟಿಸ್ ಕೊಡಲಾಗುವುದು ಎಂದು ಪೊಲೀಸರು ತಿಳಿಸಿದರು.