Advertisement

ಇನ್ಫಿಯ ಕಿರಿಯ ಸಿಬ್ಬಂದಿಗಿಲ್ಲ ಎಚ್‌-1ಬಿ ಭಾಗ್ಯ!

03:50 AM Mar 21, 2017 | |

ಬೆಂಗಳೂರು: ಸಂಸ್ಥೆಯ ಯಾವುದೇ ಕಿರಿಯ ಉದ್ಯೋಗಿಗಳು ಇನ್ನು ಎಚ್‌- 1ಬಿ ವೀಸಾಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಐಟಿ ದಿಗ್ಗಜ ಇನ್ಫೋಸಿಸ್‌ ತನ್ನ ಸಿಬ್ಬಂದಿಗೆ ಸೂಚನೆ ಹೊರಡಿಸಿದೆ. ಐಟಿ ಉದ್ಯೋಗದ ಹೊಸ್ತಿಲಲ್ಲೇ ಅಮೆರಿಕದ ಕನಸು ಕಾಣುವ ಸಂಸ್ಥೆಯ ಆಕಾಂಕ್ಷಿಗಳಿಗೆ ಇದರಿಂದ ನಿರಾಶೆ ಆದಂತಾಗಿದೆ.

Advertisement

“ಎಚ್‌- 1ಬಿ ವೀಸಾ ಬಳಸಿಕೊಂಡು ವಿದೇಶಕ್ಕೆ ಹಾರುವ ಪರಿಪಾಠ ನಿಲ್ಲಬೇಕು’ ಎಂದು ಇತ್ತೀಚೆಗಷ್ಟೇ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ ಬೆನ್ನಲ್ಲೇ ಸಂಸ್ಥೆ ಈ ತೀರ್ಮಾನಕ್ಕೆ ಬಂದಿದೆ. ಕನಿಷ್ಠ 4 ವರ್ಷದ ತನಕ ಯಾವ ಸಿಬ್ಬಂದಿಯೂ ಅರ್ಜಿ ಸಲ್ಲಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

“ಸಾಗರೋತ್ತರದ ಮಂದಿ ಭಾರತಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತು ಅಲ್ಲಿನ ಕಿರಿಯ ಉದ್ಯೋಗಿಗಳಿಗೆ ಭಾರತ ಕೆಲಸ ಕೊಟ್ಟಿದೆ. ಎಚ್‌-1ಬಿ ವೀಸಾದ ಕನಸಿನ ಗುಂಗಿನಲ್ಲೇ ಇಲ್ಲಿನ ಕಿರಿಯ ಉದ್ಯೋಗಿಗಳು ಕೆಲಸಕ್ಕೆ ಬರುತ್ತಾರೆ’ ಎಂಬುದು ಸಂಸ್ಥೆಯ ಎಕ್ಸಿಕ್ಯೂಟಿವ್‌ ಒಬ್ಬರ ಮಾತು. ಇದರೊಂದಿಗೆ, ಸಿಸ್ಟಮ್ಸ್‌ ಎಂಜಿನಿಯರ್‌ ಮತ್ತು ಸೀನಿಯರ್‌ ಸಿಸ್ಟಮ್ಸ್‌ ಎಂಜಿನಿಯರುಗಳೂ ಅರ್ಜಿ ಸಲ್ಲಿಸುವಂತಿಲ್ಲ ಎಂದು ಸೂಚನೆ ಹೊರಡಿಸಲಾಗಿದೆ. ಟ್ರಂಪ್‌ ಸರಕಾರದ ಎಚ್‌-1ಬಿ ವೀಸಾ ಕಡಿತ ನೀತಿ ಹಿನ್ನೆಲೆಯಲ್ಲಿ ಈ ಕ್ರಮ ಎನ್ನಲಾಗಿದೆ.

ಯಾರಿಗೂ ಲಾಭ ಇಲ್ಲ:  ಸಂಸ್ಥೆಯ ಈ ಆದೇಶದಿಂದ ಹಿರಿಯ ಉದ್ಯೋಗಿಗಳಿಗೆ ಲಾಭವಂತೂ ಇಲ್ಲ. ಲಿಂಕ್ಡ್ಇನ್‌ನ ಪ್ರಕಾರ, ಅಮೆರಿಕದಲ್ಲಿ 150 ಕೆಲಸ ಖಾಲಿ ಇದೆ ಎಂದು ಕಳೆದ ತಿಂಗಳು ಜಾಹೀರಾತು ಪ್ರಕಟವಾಗಿತ್ತು. ಅನೇಕ ಸಂಸ್ಥೆಗಳು ಕೇವಲ 2 ವರ್ಷದ ಅನುಭವ ಕೇಳಿದ್ದವು. ಈಗ ಹಿರಿಯ (ಅನುಭವಿ) ಸಿಬ್ಬಂದಿಗೆ ಈ ವೀಸಾ ಸೌಲಭ್ಯ ಸಿಕ್ಕರೂ ಪ್ರಯೋಜನವಿಲ್ಲ.. ಸಂಸ್ಥೆ ತೊರೆಯುವ ಉದ್ಯೋಗಿಗಳನ್ನು ಆದಷ್ಟು ತನ್ನಲ್ಲಿಯೇ ಉಳಿಸಿಕೊಳ್ಳಲು ಇನ್ಫೋಸಿಸ್‌ ನಿರ್ಧರಿಸಿದೆ ಎನ್ನಲಾಗಿದೆ.

ಕಾಗ್ನಿಝಂಟ್‌ನ 6 ಸಾವಿರ ಕೆಲಸಕ್ಕೆ ಕತ್ತರಿ?
ವೇತನ ಮೌಲ್ಯಮಾಪನ ಸಮೀಪಿಸುತ್ತಿದ್ದಂತೆ ಐಟಿ ಜಗತ್ತಿನಲ್ಲಿ ಉದ್ಯೋಗ ಕತ್ತರಿ ಪರ್ವ ಆರಂಭಗೊಂಡಿದೆ. ಅಮೆರಿಕದ ಮೂಲದ ಕಾಗ್ನಿಜೆಂಟ್‌ ಸಂಸ್ಥೆ ಇದೀಗ ಭಾರತದಲ್ಲಿ 6 ಸಾವಿರ ಸಿಬ್ಬಂದಿಗೆ ಗೇಟ್‌ಪಾಸ್‌ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ. ಒಟ್ಟಾರೆ 2,65,000 ಸಿಬ್ಬಂದಿ ಇರುವ ಕಾಗ್ನಿಜೆಂಟ್‌ ಸಂಸ್ಥೆಯಲ್ಲಿ ಶೇ.2-3 ಮಂದಿ ಕನಿಷ್ಠ ಕಾರ್ಯನಿರ್ವಹಣೆಗೆ ಒಳಪಟ್ಟಿದ್ದಾರೆ. ಕಂಪೆನಿ ಯಾಂತ್ರೀಕೃತ ಅಳವಡಿಕೆಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ 6 ಸಾವಿರ ಸಿಬ್ಬಂದಿಯ ಕೆಲಸಕ್ಕೆ ಕುತ್ತು ಬರಲಿದೆ ಎನ್ನಲಾಗಿದೆ. “ಇಂಥ ಕ್ರಮಗಳನ್ನು ಇತರ ಐಟಿ ಕಂಪೆನಿಗಳೂ ಕೈಗೊಳ್ಳುತ್ತವೆ. ನಾವು ಮಾತ್ರ ಅಲ್ಲ’ ಎಂದು ಕಂಪೆನಿ ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next