ಮಂಗಳೂರು: ಸರಕಾರದ ವಿವಿಧ ಯೋಜನೆಗಳ ಸಹಾಯ ಧನ ಪಡೆಯಲು ಫಲಾನುಭವಿಗಳು ಆಧಾರ್ ಸೀಡಿಂಗ್ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಅದರ ಪರಿಹಾರಕ್ಕೆ ಅಂಚೆ ಇಲಾಖೆ ಮುಂದಾಗಿದ್ದು, ಮಂಗಳೂರು ಮತ್ತು ಪುತ್ತೂರು ಅಂಚೆ ವಿಭಾಗಗಳಲ್ಲಿ “ಸರಕಾರದ ಸವಲತ್ತುಗಳು ಪಡೆಯುವ ನನ್ನ ಖಾತೆ’ ಎಂಬ ಹೊಸ ಸೇವೆಯನ್ನು ಆರಂಭಿಸಲಾಗಿದೆ. ಮಂಗಳೂರು ವಿಭಾಗದ ಹಿರಿಯ ಅಂಚೆ ಅಧಿಧೀಕ್ಷಕ ಶ್ರೀ ಹರ್ಷ ಅವರು ಪತ್ರಿಕಾ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಉದ್ಯೋಗ ಖಾತ್ರಿ ವೇತನ, ಪಿ.ಎಂ. ಕಿಸಾನ್, ಹಾಲಿನ ಸಬ್ಸಿಡಿ (ರಾಜ್ಯ ಸರಕಾರದ ಯೋಜನೆ), ಫಸಲ್ ವಿಮಾ ಯೋಜನೆಯ ವಿಮಾ ಮೊತ್ತ, ಹವಾಮಾನ ಆಧಾರಿತ ಬೆಳೆ ವಿಮೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾಕ ಕಲ್ಯಾಣ ಇಲಾಖೆಯ ವಿವಿಧ ಪ್ರೀ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಬಸವ ವಸತಿ ಯೋಜನೆ ಮತ್ತಿತರ ವಿವಿಧ ವಸತಿ ಯೋಜನೆಗಳ ಸಹಾಯಧನ ಇತ್ಯಾದಿ ಪಾವತಿಗೆ ಆಧಾರ್ ಸೀಡಿಂಗ್ ಅತ್ಯಗತ್ಯ.
ಈ ಯೋಜನೆಗಳಿಗೆ ಅರ್ಜಿ ಹಾಕುವಾಗ ಕೊಟ್ಟ ಖಾತೆ ಒಂದು, ಹಣ ಜಮೆಯಾಗುತ್ತಿರುವುದು ಇನ್ನೊಂದು ಖಾತೆಗೆ ಎಂಬಿತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ತತ್‌ಕ್ಷಣ ಸಮೀಪದ ಅಂಚೆ ಕಚೇರಿಗೆ ತೆರಳಿ ಅಲ್ಲಿರುವ ತಮ್ಮ ಉಳಿತಾಯ ಖಾತೆಗೆ ಈ ಎಲ್ಲ ಯೋಜನೆಗಳ ಹಣ ಜಮೆಯಾಗುವಂತೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಗ್ಗೆ ಅಂಚೆ ಕಚೇರಿ ಅಥವಾ ಪೋಸ್ಟ್‌ಮ್ಯಾನ್‌ಗಳಿಂದಲೂ ಮಾಹಿತಿ ಪಡೆಯಬಹುದಾಗಿದೆ ಎಂದರು.
ಇದಕ್ಕಾಗಿ ಸರಳ ಅರ್ಜಿ ನಮೂನೆಯನ್ನು ಸಿದ್ಧಪಡಿಸಲಾಗಿದೆ. ಈ ಸೇವೆ ಪಡೆಯಲು ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಜೋಡಣೆಗೊಂಡ ಮೊಬೈಲ್ ತಂದಿರಬೇಕು. ಅವರಿಗೆ ಕೇವಲ 100 ರೂ.ಗಳಲ್ಲಿ ಒಂದು ಐಪಿಪಿಬಿ (ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್) ಖಾತೆಯನ್ನು ಮಾಡಿ ಅವರಿಗೆ ಬರುವ ಯೋಜನೆಗಳ ಹಣ ಯಾವ ಬ್ಯಾಂಕ್ ಖಾತೆಗೆ ಬರುತ್ತಿದೆ. ಅಥವಾ ಆಧಾರ್ ಸೀಡಿಂಗ್ ಆಗಿದೆಯೇ? ಇಲ್ಲವೇ? ಎಂಬುದನ್ನು ತಿಳಿಸಲಾಗುತ್ತದೆ. ಜತೆಗೆ ಅವರು ಯೋಜನೆಗಳ ಮೊತ್ತ ವರ್ಗಾವಣೆಗಾಗಿ ಈಗಿರುವ ಅವರ ಬ್ಯಾಂಕ್ ಖಾತೆಯನ್ನು ಮುಂದುವರಿಸಬಹುದು. ಇಲ್ಲವೇ ಐಪಿಪಿಬಿ ಖಾತೆಗೆ ವರ್ಗಾವಣೆ ಮಾಡಬಹುದು ಎಂದರು.
ಡಾಕ್ ಪೇ :
ಡಿಜಿಟಲ್ ಹಣ ಸ್ವೀಕಾರಕ್ಕೆ ಸಂಬಂಧಿಸಿ ಅಂಚೆ ಇಲಾಖೆಯು ಫೋನ್ ಪೇ, ಗೂಗಲ್ ಪೇ ಮಾದರಿಯಲ್ಲಿ ಡಾಕ್ ಪೇ ಎಂಬ ಹೊಸ ಸೇವೆಯನ್ನೂ ಆರಂಭಿಸಿದೆ ಎಂದು ಶ್ರೀಹರ್ಷ ತಿಳಿಸಿದರು.