Advertisement

ಉತ್ತಮ ಫಲಿತಾಂಶಕ್ಕಾಗಿ ವಿನೂತನ ಕಾರ್ಯಕ್ರಮ

12:09 PM Jan 06, 2020 | Team Udayavani |

ಹುನಗುಂದ: ಮಾರ್ಚ್‌-ಏಪ್ರಿಲ್‌ನಲ್ಲಿ ನಡೆಯುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಈ ಬಾರಿ ಹುನಗುಂದ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ನೂತನ ಹಾಗೂ ವಿಶಿಷ್ಟ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರುರಾಜ ದಾಶ್ಯಾಳ ಹೇಳಿದರು.

Advertisement

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುನಗುಂದ ತಾಲೂಕು ಸತತ ಮೂರು ವರ್ಷಗಳಿಂದ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಉತ್ತಮ ಫಲಿತಾಂಶಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ನಾಲ್ಕು ರೂಪನಾತ್ಮಕ ಪರೀಕ್ಷೆ ಮತ್ತು ಆರು ತಿಂಗಳಿಗೊಮ್ಮೆ ಎರಡು ಸಂಕಲನಾತ್ಮಕ ಪರೀಕ್ಷೆ ನಡೆಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಬೋಧನೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿಯೊಂದು ಶಾಲೆಯಲ್ಲಿ ಪ್ರತಿ ಹದಿನೈದು ದಿನಕ್ಕೆ ಮತ್ತು ತಿಂಗಳಿಗೊಮ್ಮೆ ಆ ಶಾಲೆಯ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರೊಂದಿಗೆ ಪಠ್ಯ ವಿಚಾರಕ್ಕೆ ಸಂಬಂಧಿಸಿದ ಸಭೆ ಕರೆದು ಚರ್ಚೆ ಮಾಡಲಾಗುತ್ತಿದೆ ಎಂದರು.

ಪ್ರತಿ ಬ್ಲಾಕ್‌ ಹಂತದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಪ್ರತಿಯೊಂದು ವಿಷಯಕ್ಕೆ 6 ಜನ ಸಂಪನ್ಮೂಲ ಶಿಕ್ಷಕರಿಂದ ಪರೀಕ್ಷೆಯ ಪಾಸಿಂಗ್‌ ಪ್ಯಾಕೇಜ್‌ ತಯಾರಿಸಿ ಅದನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಇನ್ನು ಪ್ರತಿ ತಿಂಗಳು ತಾಯಂದಿರ ಮತ್ತು ಪೋಷಕರ ಸಭೆ ನಡೆಸಿ ವಿದ್ಯಾರ್ಥಿಗಳ ಪ್ರಗತಿಯನ್ನು ವಿಶ್ಲೇಷಿಸುವ ವ್ಯವಸ್ಥೆಯು ಕೂಡ ಪ್ರತಿ ಶಾಲೆಯಲ್ಲಿ ಮಾಡಲಾಗುತ್ತಿದೆ. ಪಿಕ್ನಿಕ್‌ ಪಝಲ್‌ ಕಾರ್ಯಕ್ರಮ ಮಾಡುವ ಮೂಲಕ ಒಂದು ಶಾಲೆಯ 10ನೆಯ ತರಗತಿಯ ಮಕ್ಕಳನ್ನು ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಅವರಿಗೆ ಎಲ್ಲ ವಿಷಯಗಳ ಬಗ್ಗೆ ವಿಶೇಷ ಚರ್ಚೆ ಮಾಡಿಸಿ ಮನದಟ್ಟು ಮಾಡಲಾಗುವುದು ಎಂದರು.

ಜನವರಿಯಿಂದ ನಾಲ್ಕು ಸರಣಿ ಪರೀಕ್ಷೆ ತೆಗೆದುಕೊಳಲಾಗುತ್ತಿದೆ. ಈ ಬಾರಿ ನಾಲ್ಕನೆಯ ಸರಣಿ ಪರೀಕ್ಷೆಯನ್ನು ರಾಜ್ಯ ಮಟ್ಟದ ವಾರ್ಷಿಕ ಪರೀಕ್ಷೆಯ ಮಾದರಿಯಲ್ಲಿ ನಾಲ್ಕೈದು ಶಾಲೆಗೆ ಒಂದು ಪರೀಕ್ಷೆ ಕೇಂದ್ರ ಮಾಡಿ ಫೆ. 17ರಿಂದ 24ರವರೆಗೆ ವಿಶೇಷ ಪರೀಕ್ಷೆ ನಡೆಸುವ ತಯಾರಿ ಮಾಡಲಾಗುತ್ತಿದೆ. ರಾಜ್ಯಮಟ್ಟದ ಮೌಲ್ಯಮಾಪನದ ಮಾದರಿಯಂತೆ ಮೌಲ್ಯಮಾಪನ ಮಾಡಲಾಗುವುದು ಎಂದರು.

ಶಾಲೆಯ ಎಲ್ಲ ಶಿಕ್ಷಕರು ಮತ್ತು ಸಮುದಾಯ ವಿಶೇಷ ಸಹಕಾರದ ಅಗತ್ಯವಾಗಿದೆ. ವಾರ್ಷಿಕ ಪರಿಕ್ಷೆಗೆ ಮುಂಚೆ ಈ ರೀತಿ ಪರೀಕ್ಷೆ ನಡೆಸುವುದರಿಂದ ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಬಹುದು ಮತ್ತು ಪರೀಕ್ಷೆ ಎದುರಿಸುವ ರೀತಿ ವಿದ್ಯಾರ್ಥಿಗಳಲ್ಲಿ ಮನದಟ್ಟಾಗುತ್ತದೆ ಎಂದರು. ಶಾಲೆಯ ಮುಕ್ತಾಯಗೊಂಡ ಮೇಲೆ ಶಿಕ್ಷಕರ ಮುಖಾಂತರ ಮಕ್ಕಳ ಓದಿಗೆ ಅವಕಾಶ ನೀಡುವ ವಿಶೇಷ ಕಾರ್ಯಕ್ರಮ, ವಿಜ್ಞಾನ ಪ್ರಯೋಗ ಪ್ರಾತ್ಯಕ್ಷಿಕೆ, ಹಳೆಯ ವಿದ್ಯಾರ್ಥಿಗಳಿಂದ ವಿಶೇಷ ಕಲಿಕೆ ಸಿದ್ದತೆ ಕುರಿತು ಪ್ರೇರಣೆ ನೀಡಿಸುವುದು, ಪ್ರಶ್ನೆಪತ್ರಿಕೆಯ ಸಮಾಲೋಚನೆ ಕಾರ್ಯಕ್ರಮ, ಮಕ್ಕಳ ಏಕಾಗ್ರತೆಗೆ ಯೋಗ ತರಬೇತಿ ಮತ್ತು ಫೆಬ್ರವರಿಯಲ್ಲಿ ಮಕ್ಕಳ ಪರೀಕ್ಷೆ ಸಿದ್ಧತೆ ಮತ್ತು ಸಮಸ್ಯೆಯ ಕುರಿತು ಫೋನ್‌ ಇನ್‌ ನೇರ ಕಾರ್ಯಕ್ರಮ ನಡೆಸಲಾಗುವುದು ಎಂದರು.

Advertisement

ಶಿಕ್ಷಕ ಎಸ್‌.ಬಿ.ಪಾಟೀಲ, ಪಿ.ಬಿ.ಹಿರೇಗುದ್ದಿ, ಎಸ್‌.ಬಿ. ಸಜ್ಜನ, ಎಸ್‌.ಎಚ್‌. ಮೇಟಿ, ಬಿ.ಜಿ.ವಡವಡಗಿ ಸೇರಿದಂತೆ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next