Advertisement
ಈ ಹಿನ್ನೆಲೆಯಲ್ಲಿ ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡಿ, ಆ ಬಗ್ಗೆ ಜಾಗೃತಿ ಮೂಡಿಸಿ ಸೂಕ್ತ ಚಿಕಿತ್ಸೆ ನೀಡುವ ವಿನೂತನ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.
Related Articles
Advertisement
ಈಗಾಗಲೇ ಚಿಕ್ಕಮಗಳೂರು, ಉಡುಪಿ, ಮೈಸೂರು, ರಾಯಚೂರು, ಗದಗ ಹಾಗೂ ಹಾವೇರಿ ಜಿಲ್ಲೆಗಳ ಆಯ್ದ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಜನಸಂಖ್ಯಾಧಾರಿತ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅದರಂತೆ ಏಪ್ರಿಲ್‌ನಿಂದೀಚೆಗೆ 50 ಸಾವಿರಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆ ಪೈಕಿ 892 ಜನರು ಮಧುಮೇಹ, 953 ಮಂದಿ ರಕ್ತದೊತ್ತಡ, 17 ಮಂದಿ ಕ್ಯಾನ್ಸರ್‌ಗೆ ಒಳಗಾಗಿರುವುದು ಕಂಡುಬಂದಿದೆ.
30 ವರ್ಷ ಮೇಲ್ಪಟ್ಟವರಿಗೆಲ್ಲ ತಪಾಸಣೆ: ಯೋಜನೆಯಲ್ಲಿ ಪ್ರಾಥಮಿಕ/ ಸಮುದಾಯ ಆರೋಗ್ಯ ಕೇಂದ್ರಗಳ ಶೂಶ್ರೂಷಕಿಯರು, ಅರೇ ವೈದ್ಯಕೀಯ ಸಿಬ್ಬಂದಿಗೆ ಅಸಾಂಕ್ರಾಮಿಕ ರೋಗಗಳ ಪತ್ತೆ ಹಚ್ಚುವ ಕುರಿತು ತರಬೇತಿ ನೀಡಲಾಗಿದೆ. ಅದರಂತೆ ಅವರೆಲ್ಲ ತಮ್ಮ ವ್ಯಾಪ್ತಿಗೆ ಬರುವ ಪ್ರತಿ ಗ್ರಾಮಕ್ಕೆ ತೆರಳಿ 30 ವರ್ಷ ಮೇಲ್ಪಟ್ಟವರ ಮಾಹಿತಿ ಕಲೆ ಹಾಕಿ, ನಂತರ ಅವರನ್ನು ತಪಾಸಣೆಗೆ ಒಳಪಡಿಸಲಿದ್ದಾರೆ. ಈ ವೇಳೆ ರೋಗದ ಗುಣಾತ್ಮಕ ಲಕ್ಷಣಗಳು ಕಂಡುಬಂದರೆ ಹೆಚ್ಚಿನ ಪರೀಕ್ಷೆಗೆ ಸಮೀಪದ ಆಸ್ಪತ್ರೆಗಳಿಗೆ ಕಳುಹಿಸುತ್ತಾರೆ.
ರೋಗಿ ನಿರಾಕರಿಸಿದರೂ, ಚಿಕಿತ್ಸೆ ಖಚಿತ: ರೋಗ ಲಕ್ಷಣಗಳು ಕಂಡಬಂದ ಕೂಡಲೇ ಆರೋಗ್ಯ ಕೇಂದ್ರದ ಸಿಬ್ಬಂದಿ ಸಂಬಂಧಿಸಿದ ವ್ಯಕ್ತಿಯ ಸಂಪೂರ್ಣ ವಿವರವನ್ನೊಳಗೊಂಡ ವೈದ್ಯಕೀಯ ಕಡತ ಸಿದ್ಧಪಡಿಸುತ್ತಾರೆ. ಆನಂತರ ನಿರಂತರವಾಗಿ ಆ ವ್ಯಕ್ತಿಯನ್ನು ಸಂಪರ್ಕಿಸಿ ಆಗುತ್ತಿರುವ ತೊಂದರೆ, ಚಿಕಿತ್ಸೆ ಪಡೆಯುತ್ತಿರುವ ಹಾಗೂ ಸೂಚಿಸಿದ ಔಷಧಿಗಳನ್ನು ಕಾಲಕಾಲಕ್ಕೆ ಪಡೆಯುತ್ತಿರುವ ಬಗ್ಗೆ ಪರಿವೀಕ್ಷಣೆ ನಡೆಸುತ್ತಾರೆ. ಒಂದೊಮ್ಮೆ ರೋಗಿಯು ಅಸಡ್ಡೆ ಮಾಡಿದರೆ ಸ್ವಯಂ ಜವಾಬ್ದಾರಿಯಿಂದ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.
ಈಗಾಗಲೇ ಆರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಜನಸಂಖ್ಯೆ ಆಧರಿಸಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಯೋಜನೆ ವಿಸ್ತರಿಸಲಾಗುವುದು.– ಡಾ.ಸೆಲ್ವರಾಜ್, ಉಪ ನಿರ್ದೇಶಕ, ಅಸಾಂಕ್ರಾಮಿಕ ರೋಗಗಳ ಘಟಕ, ಆರೋಗ್ಯ ಇಲಾಖೆ – ಜಯಪ್ರಕಾಶ್ ಬಿರಾದಾರ್