Advertisement

ಪ್ಲಾಸ್ಟಿಕ್‌ ನಿಷೇಧ ಜಾಗೃತಿಗೆ ವಿನೂತನ ಪ್ರಚಾರ

03:42 PM Oct 01, 2019 | Suhan S |

ಮುದ್ದೇಬಿಹಾಳ: ಪ್ಲಾಸ್ಟಿಕ್‌ ನಿಷೇಧ ಅಭಿಯಾನ ಕಾರ್ಯಕ್ರಮವನ್ನು ಪರಿಣಾಮ ಕಾರಿಯಾಗಿಸಲು ಇಲ್ಲಿನ ಪುರಸಭೆ ಅಧಿಕಾರಿ ವರ್ಗ ವಿನೂತನ ಮಾರ್ಗ ಕಂಡುಕೊಂಡಿದ್ದು ಸೋಮವಾರ ಪ್ಲಾಸ್ಟಿಕ್‌ನ ಶವಯಾತ್ರೆ, ವೈಕುಂಠಾರಾಧನೆ ನಡೆಸುವ ಮೂಲಕ ವಿನೂತನ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

Advertisement

ಪುರಸಭೆಯ ಮುಕ್ತಿ ವಾಹನದ ಖುರ್ಚಿಯ ಮೇಲೆ ಪ್ಲಾಸ್ಟಿಕ್‌ ಅನ್ನು ಶವದ ಹಾಗೆ ಕಾಣುವಂತೆ ಅಲಂಕರಿಸಿ, ವಾಹನದ ಸುತ್ತಲೂ ಪ್ಲಾಸ್ಟಿಕ್‌ ಚೀಲಗಳನ್ನು ಕಟ್ಟಲಾಗಿತ್ತು. ವಾಹನದ ಮುಂದಿನ ಭಾಗದ ವಿಂಡ್‌ ಶೀಲ್ಡ್‌ ಗ್ಲಾಸಿಗೆ ಪ್ಲಾಸ್ಟಿಕ್‌ ಶವಯಾತ್ರೆ, ಪ್ಲಾಸ್ಟಿಕ್‌ ವೈಕುಂಠಾರಾಧನೆ ಎನ್ನುವ ಬೋರ್ಡ್‌ ಅಂಟಿಸಲಾಗಿತ್ತು. ಸ್ವಚ್ಛತಾ ಹೀ ಸೇವಾ, ಪ್ಲಾಸ್ಟಿಕ್‌ ತ್ಯಜಿಸಿ, ಪರಿಸರ ಉಳಿಸಿ, ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎನ್ನುವ ಬ್ಯಾನರ್‌ ಅನ್ನು ವಾಹನದ ಮುಂಭಾಗ ಅಳವಡಿಸಲಾಗಿತ್ತು. ಪುರಸಭೆಯ ಇಬ್ಬರು ಪೌರ ಕಾರ್ಮಿಕರು ಮೆರವಣಿಗೆಯುದ್ದಕ್ಕೂ ಹಲಗೆ ಬಾರಿಸಿ ಜನರ ಗಮನ ಸೆಳೆದರು.

ಮುಖ್ಯಾಧಿಕಾರಿ ಎಸ್‌.ಎಫ್‌. ಈಳಗೇರ ಅವರು ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಪ್ಲಾಸ್ಟಿಕ್‌ ತಯಾರಿಕೆ ಮತ್ತು ಮಾರಾಟವನ್ನು ಮುದ್ದೇಬಿಹಾಳ ಪಟ್ಟಣ ವ್ಯಾಪ್ತಿಯಲ್ಲಿ ಸಂಪೂರ್ಣ ನಿಷೇ ಧಿಸಲಾಗಿದೆ. ನಿಯಮ ಮೀರಿ ಪಟ್ಟಣದ ಅಂಗಡಿ, ಮುಂಗಟ್ಟುಗಳಲ್ಲಿ, ಬೀದಿ ಬದಿ ಎಲ್ಲಿಯಾದರೂ ಸರಿ ಪ್ಲಾಸ್ಟಿಕ್‌ ಚೀಲಗಳನ್ನು, ವಸ್ತುಗಳನ್ನು ಮಾರುತ್ತಿರುವುದು ಕಂಡು ಬಂದಲ್ಲಿ ಪುರಸಭೆ ಅಧಿ ಕಾರಿಗಳ ತಂಡ ದಾಳಿ ನಡೆಸಿ ವಶಪಡಿಸಿಕೊಳ್ಳುವುದಲ್ಲದೆ ಸಂಬಂಧಿಸಿದವರಿಗೆ ದಂಡವಿಧಿಸಲಾಗುತ್ತದೆ ಎಂದು ತಿಳಿಸಿದರು. ಪುರಸಭೆ ಆರೋಗ್ಯ ಅಧಿ ಕಾರಿ ಬಸವರಾಜ ಕಟ್ಟಿಮನಿ, ಬಸವರಾಜ ಬಾಗೇವಾಡಿ, ಪುರಸಭೆಯ ಸಿಬ್ಬಂದಿ, ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.

ಶವಯಾತ್ರೆಯ ಜನಜಾಗೃತಿ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ಸಂಚರಿಸಿ ಪ್ಲಾಸ್ಟಿಕ್‌ ನಿಷೇಧ ಕುರಿತು ವಿನೂತನ ಜನಜಾಗೃತಿ ಮೂಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next